ಭಾರತಕ್ಕೆ ಮತ್ತೆ ಸೋಲು: ಅಜೇಯ ದ.ಆಫ್ರಿಕಾ ಸೆಮಿಗೆ

ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್‌ಷಿಪ್‌ನ ಮಂಗಳವಾರ ನಡೆದ ತನ್ನ ಕೊನೆಯ ಪಂದ್ಯದಲ್ಲೂ ಭಾರತ ಸೋಲನ್ನು ಅನುಭವಿಸಿದೆ. ದಕ್ಷಿಣ ಆಫ್ರಿಕಾ ತಂಡ 12ರನ್‌ಗಳಿಂದ ಭಾರತವನ್ನು ಮಣಿಸಿ ಅಜೇಯವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಹಾಲಿ ಚಾಂಪಿಯನ್ ಭಾರತ ತನ್ನ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದೆ.

PTIPTI
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಕಪ್ತಾನ ಗ್ರೇಮ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಆದರೆ ಗಿಬ್ಸ್(5) ಆರ್ ಪಿ ಸಿಂಗ್ ಎಸೆತದಲ್ಲಿ ಬೌಲ್ಡ್ ಆದರು. ಎರಡನೇ ವಿಕೆಟ್‌ಗೆ ನಾಯಕ ಸ್ಮಿತ್ ಹಾಗೂ ಎ ಬಿ ಡಿ ವಿಲಿಯರ್ಸ್ ಸೇರಿಕೊಂಡು 46ರನ್ ಒಟ್ಟಸೇರಿಸಿದರು. 26ರನ್ ಗಳಿಸಿದ ಸ್ಮಿತ್ ಹರ್ಭಜನ್ ಎಸೆತದಲ್ಲಿ ಜಡೇಜಾಗೆ ಕ್ಯಾಚಿತ್ತು ಮರಳಿದರು.

ನಂತರ ಬಂದ ಡ್ಯುಮಿನಿ(10) ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್‌ಮಾನ್ ಬೌಚರ್(11) ಹೆಚ್ಚೇನೂ ಸಾಧಿಸಲಾಗದೆ ಬೇಗನೆ ಮರಳಿದರು. ಆದರೆ ಒಂದು ತುದಿಯಿಂದ ರನ್ ಗತಿ ಹೆಚ್ಚಿಸಿದ ಎ ಬಿ ಡಿ ವಿಲಿಯರ್ಸ್ 51 ಎಸೆತಗಳಲ್ಲಿ 63ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿಗಳು ಸೇರಿದ್ದವು. ಕೊನೆಗೆ ಬಂದ ಆಲ್ಬಿ ಮೋರ್ಕೆಲ್ 8 ಹಾಗೂ ಬೋಥಾ 4ರನ್ ಗಳಿಸಿ ಔಟಾಗದೆ ಉಳಿದರು.

ಒಟ್ಟಾರೆಯಾಗಿ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 130ರನ್ ಗಳಿಸಿತು. ನಿಕಾರವಾದ ಬೌಲಿಂಗ್ ದಾಳಿಯನ್ನು ಸಂಘಟಿಸಿದ ಟೀಮ್ ಇಂಡಿಯಾ ಪರ ಜಹೀರ್, ಆರ್ ಪಿ ಸಿಂಗ್, ಜಡೇಜಾ, ಹರ್ಭಜನ್ ಹಾಗೂ ರೈನಾ ತಲಾ ಒಂದೊಂದು ವಿಕೆಟ್ ಕಿತ್ತರು. ಇದೇ ವೇಳೆ ನಾಯಕ ಧೋನಿ 20 ಓವರ್‌ಗಳನ್ನು ಭರ್ತಿಗೊಳಿಸಲು ಎಂಟು ಬೌಲರ್‌ಗಳನ್ನು ಉಪಯೋಗಿಸಿದ್ದು ವಿಶೇಷವಾಗಿತ್ತು.

131ರ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಟೀಮ್ ಇಂಡಿಯಾಕ್ಕೆ ಆರಂಭಿಕರಾದ ಗೌತಮ್ ಗಂಭೀರ್ ಹಾಗೂ ರೋಹಿತ್ ಶರ್ಮ ಸೇರಿ ಉತ್ತಮ ಆರಂಭವನ್ನೇ ಒದಗಿಸಿದರು. ಇವರಿಬ್ಬರು ಸೇರಿ ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲಿ 48ರನ್ ಸೇರಿಸಿದರು. ಈ ಹಂತದಲ್ಲಿ ಗಂಭೀರ್ ಸ್ಪಿನ್ನರ್ ಬೋಥಾ ಎಸೆತಕ್ಕೆ ಬಲಿಯಾದರು. 19 ಎಸೆತಗಳನ್ನು ಎದುರಿಸಿದ ಅವರು 3 ಬೌಂಡರಿ ನೆರವಿನಿಂದ 21ರನ್ ಗಳಿಸಿದರು.

ಗಂಭೀರ್ ಔಟಾದ ಕೂಡಲೇ ಟೀಮ್ ಇಂಡಿಯಾದ ಪತನವು ಆರಂಭವಾಯಿತು. ಸತತ ವೈಫಲ್ಯಗಳನ್ನು ಕಾಣುತ್ತಿರುವ ಸುರೇಶ್ ರೈನಾ(3) ಸರಣಿಯುದ್ಧಕ್ಕೂ ನಿರಾಸೆಯನ್ನು ಮೂಡಿಸಿದರು. ಆರಂಭಿಕ ರೋಹಿತ್ ಶರ್ಮ ಸ್ವಲ್ಪ ಹೊತ್ತು ಕ್ರೀಸಿನಲ್ಲಿ ನೆಲೆಯೂರಿ ನಿಂತು 28 ಎಸೆತಗಳಲ್ಲಿ 29ರನ್ ಗಳಿಸಿ ಗಂಭೀರ್ ದಾರಿ ಹಿಡಿದರು.

ನಂತರ ಬಂದ ನಾಯಕ ಧೋನಿ 5ರನ್ ಗಳಿಸಿ ಔಟಾದರೆ ಯೂಸುಫ್ ಪಠಾಣ್ ಶೂನ್ಯಕ್ಕೆ ಬಲಿಯಾದರು. ಉಪನಾಯಕ ಯುವರಾಜ್ ಸಿಂಗ್ ತಂಡದ ಗೆಲುವಿಗಾಗಿ ಪ್ರಯತ್ನ ನಡೆಸಿದರೂ ಅದು ಫಲಕಾರಿಯಾಗಲಿಲ್ಲ. ಯುವಿ 25 ಎಸೆತಗಳಲ್ಲಿ 25ರನ್ ಬಾರಿಸಿ ಸ್ಟೈನ್ ಎಸೆತದಲ್ಲಿ ಬೌಚರ್‌ಗೆ ಕ್ಯಾಚಿತ್ತರು. ಯುವಿ ಬೆಂಬಲಕ್ಕೆ ನಿಂತ ಹರ್ಭಜನ್ 14ರನ್ ಗಳಿಸಿ ಬೋಥಾಗೆ ಮೂರನೇ ಬಲಿಯಾದರು.

ಅಂತಿಮವಾಗಿ ಜಹೀರ್ ಖಾನ್ 4, ರವೀಂದ್ರ ಜಡೇಜಾ 7 ಹಾಗೂ ಆರ್ ಪಿ ಸಿಂಗ್ ಅಜೇಯ 2ರನ್ ಗಳಿಸಿ ಔಟಾಗದೆ ಉಳಿದರು. ಆದರೆ ಭಾರತ ಗೆಲುವಿನಿಂದ 12ರನ್‌ಗಳಿಂದ ದೂರವೇ ಉಳಿಯಿತು. ಭಾರತ ನಿಗದಿತ 20 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 118ರನ್ ಗಳಿಸಲಷ್ಟೇ ಶಕ್ತವಾಯಿತು.

ಉತ್ತಮ ದಾಳಿ ಸಂಘಟಿಸಿದ ದಕ್ಷಿಣ ಆಫ್ರಿಕಾ ಸ್ಪಿನ್ನರ್‌ಗಳಾದ ಬೋಥಾ 3, ಡುಮಿನಿ ಹಾಗೂ ಮೆರ್ವೆ ತಲಾ ಒಂದೊಂದು ವಿಕೆಟ್ ಕಿತ್ತರೆ ಎಡಗೈ ವೇಗಿ ಪಾರ್ನೆಲ್ ಎರಡು ವಿಕೆಟ್ ಕಿತ್ತು ಮಿಂಚಿದರು. ಎ ಬಿ ಡಿ ವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು.

ತನ್ನ ಸೆಮಿಫೈನಲ್ ಅಭಿಯಾನವನ್ನು ಅಜೇಯವಾಗಿ ಮುಂದುವರಿಸಿರುವ ದಕ್ಷಿಣ ಆಫ್ರಿಕಾ ತಂಡ 'ಇ' ಗುಂಪಿನ ಅಗ್ರಸ್ಥಾನಿಯಾಗಿದ್ದು, ಗುರುವಾರದಂದು ನಡೆಯುವ ಮೊದಲ ಸೆಮಿಫೈನಲ್‌ನಲ್ಲಿ ಅದು ಪಾಕಿಸ್ತಾನ ತಂಡವನ್ನು ಇದೇ ಮೈದಾನದಲ್ಲಿ ಎದುರಿಸಲಿದೆ.