ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಆರಂಭಕ್ಕೆ ಕೇವಲ ಎರಡು ದಿನ ಬಾಕಿ ಉಳಿದಿರುವಂತೆಯೇ ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಗಾಯಗೊಂಡಿದ್ದಾರೆ. ಅಭ್ಯಾಸ ನಡೆಸುತ್ತಿದ್ದ ವೇಳೆ ಮೊಣಕಾಲಿಗೆ ಆಗಿರುವ ಗಾಯ ಗಂಭೀರವಲ್ಲ ಎಂದು ಹೇಳಲಾಗಿದೆ.
ವಡೋದರದ ರಿಲಯೆನ್ಸ್ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ವೇಗಿ ಮುನಾಫ್ ಪಟೇಲ್ ಬೌಲಿಂಗ್‌ಗೆ ಬ್ಯಾಟಿಂಗ್ ಮಾಡುತ್ತಿದ್ದಾಗ ಚೆಂಡು ಅವರ ಎಡ ಮೊಣಕಾಲಿನ ಹಿಂಬದಿಗೆ ಬಡಿದಿತ್ತು. ಗಾಯಗೊಂಡ ಅವರನ್ನು ಅಭ್ಯಾಸದ ಮಧ್ಯದಲ್ಲೇ ವಿಶ್ರಾಂತಿಗೆ ಕಳುಹಿಸಲಾಯಿತು.
'ಮುನಾಫ್‌ಗೆ ಬ್ಯಾಟಿಂಗ್ ಮಾಡುತ್ತಿದ್ದಾಗ ನಾನು ಗಾಯಗೊಂಡೆ. ನಾಳೆ ನಾನು ಗುಣಮುಖನಾಗಲಿದ್ದೇನೆ. ಆದರೆ ಮುಂಜಾನೆ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ನೋಡಿದ ನಂತರ ನಿರ್ಧರಿಸಬೇಕಿದೆ' ಎಂದು ಗಾಯಗೊಂಡ ಭಾಗಕ್ಕೆ ವೈದ್ಯಕೀಯ ಹೊದಿಕೆ ಹಾಕಿಕೊಂಡಿದ್ದ ಧೋನಿ ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಆರಂಭವಾಗಲಿರುವ ಏಳು ಏಕದಿನ ಪಂದ್ಯಗಳ ಸರಣಿಯ ಮೊದಲೆರಡು ಪಂದ್ಯಗಳಿಗಾಗಿ ಭಾರತ ತಂಡದಲ್ಲಿ ಏಕೈಕ ವಿಕೆಟ್ ಕೀಪರ್ ಆಗಿ ಧೋನಿಯಿದ್ದಾರೆ.
ಅಕ್ಟೋಬರ್ 20ರಂದು ಮುಂಬೈಯಲ್ಲಿ ಜತೆ ಸೇರಿದ್ದ ಟೀಮ್ ಇಂಡಿಯಾ, ಅಲ್ಲಿ ಮೂರು ದಿನಗಳ ಕಾಲ ಅಭ್ಯಾಸ ನಡೆಸಿತ್ತು. ವಡೋದರಕ್ಕೆ ಆಗಮಿಸಿದ ನಂತರ ಅಪರಾಹ್ನ ಮೂರು ಗಂಟೆಗಳ ಕಾಲ ತಂಡ ಅಭ್ಯಾಸ ನಡೆಸಿದೆ.