ಸಚಿನ್ ವಿಶ್ವದಾಖಲೆಯ ದ್ವಿಶತಕ; ದ.ಆಫ್ರಿಕಾ ಧೂಳಿಪಟ

ಗುರುವಾರ, 25 ಫೆಬ್ರವರಿ 2010 (08:52 IST)
PTI
ದ್ವಿಶತಕ ದಾಖಲಿಸುವ ಮೂಲಕ ಅಂತಾರಾಷ್ಟ್ರೀಯ ಏಕದಿನ ಪಂದ್ಯದ ಇತಿಹಾಸವನ್ನೇ ತಿದ್ದಿರುವ ಸಚಿನ್ ತೆಂಡೂಲ್ಕರ್ ನೆರವಿನಿಂದ ಭಾರತವು ದಕ್ಷಿಣ ಆಫ್ರಿಕಾವನ್ನು 153 ರನ್ನುಗಳ ಭಾರೀ ಅಂತರದಿಂದ ಮಣಿಸಿದ್ದು, ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಂಡಿದೆ.

ಭಾರತದ ಬೆಟ್ಟದಷ್ಟು ಮೊತ್ತದೆದುರು (401/3) ದಕ್ಷಿಣ ಆಫ್ರಿಕಾ ಆರಂಭದಿಂದಲೇ ಕುಸಿಯುತ್ತಾ ಹೋದರೂ ಒಂದು ಹಂತದಲ್ಲಿ ಸೋಲನ್ನು ತಡ ಮಾಡುವಲ್ಲಿ ಅಬ್ರಹಾಂ ಡೇ ವಿಲ್ಲರ್ಸ್ ಅವರ ಶತಕ (114*) ಪ್ರವಾಸಿಗರಿಗೆ ನೆರವಾಯಿತು. ಒಟ್ಟಾರೆ 42.5 ಓವರುಗಳಲ್ಲಿ 248 ರನ್ ಗಳಿಸಿದ ಹರಿಣಗಳು ಭಾರತದ ಮೊತ್ತದ ಸನಿಹಕ್ಕೂ ತಲುಪಲು ಸಾಧ್ಯವಾಗಲಿಲ್ಲ.

ಹಶೀಮ್ ಆಮ್ಲಾ, ಹರ್ಷೆಲ್ ಗಿಬ್ಸ್ ಮತ್ತು ಜಾಕ್ವಾಸ್ ಕ್ಯಾಲೀಸ್ ಬೃಹತ್ ಮೊತ್ತವನ್ನು ಪೇರಿಸಲು ಸಾಧ್ಯವಾದರೆ ಭಾರತ ನೀಡಿರುವ ಗುರಿಯನ್ನು ಚಿಕ್ಕ ಮೈದಾನದಲ್ಲಿ ಬೆಂಬತ್ತುವುದು ಕಷ್ಟವಲ್ಲ ಎಂದೇ ಹೇಳಲಾಗಿತ್ತಾದರೂ ಅವರು ಅಲ್ಪ ಮೊತ್ತಗಳಿಗೇ ತೃಪ್ತರಾಗುವ ಮೂಲಕ ಆತಿಥೇಯರಿಗೆ ಸಂಪೂರ್ಣವಾಗಿ ಶರಣಾದರು.

ಆಗ್ರ ಕ್ರಮಾಂಕ ಕುಸಿದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ವಿಲ್ಲರ್ಸ್ ಕೆಲವು ಆಕರ್ಷಕ ಹೊಡೆತಗಳ ಮೂಲಕ ತಂಡಕ್ಕೆ ಆಸರೆಯಾದರು.

ಆಮ್ಲಾ (34), ರೆ ವಾನ್ ಡೆರ್ ಮೆರ್ವೆ (12) ಮತ್ತು ಡೇಲ್ ಸ್ಟೈನ್‌ರನ್ನು (0) ಶ್ರೀಶಾಂತ್, ಕ್ಯಾಲೀಸ್ (11) ಮತ್ತು ವಾಯ್ನೆ ಪಾರ್ನೆಲ್‌ರನ್ನು ಆಶಿಶ್ ನೆಹ್ರಾ, ಪೀಟರ್ಸನ್ (9) ಮತ್ತು ಲಾಂಗ್‌ವೆಲ್ತ್‌ರನ್ನು (12) ರವೀಂದ್ರ ಜಡೇಜಾ ಹಾಗೂ ಗಿಬ್ಸ್ (7)ರನ್ನು ಪ್ರವೀಣ್ ಕುಮಾರ್ ಬಲಿ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ಹೋರಾಟವನ್ನು ಭಾರತೀಯರು ಸಮರ್ಥವಾಗಿ ತಡೆದರು.

ಏಕದಿನದಲ್ಲಿ ಇತಿಹಾಸ ಸೃಷ್ಟಿಸಿದ ಸಚಿನ್ ತೆಂಡೂಲ್ಕರ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸರಣಿಯ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯ ಫೆಬ್ರವರಿ 27ರಂದು ಶನಿವಾರ ನಡೆಯಲಿದೆ.

ಚೊಚ್ಚಲ ದ್ವಿಶತಕ, ವೈಯಕ್ತಿಕ ಗರಿಷ್ಠ ಮೊತ್ತ...
ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಚೊಚ್ಚಲ ದ್ವಿಶತಕ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (ಅಜೇಯ 200) ಬಿರುಸಿನಾಟದ ನೆರವಿನಿಂದ ಭಾರತ ನಿಗದಿತ 50 ಓವರಿನಲ್ಲಿ ಮೂರು ವಿಕೆಟ್ ನಷ್ಟಕ್ಕೆ 401 ರನ್‌ಗಳ ಬೃಹತ್ ಸವಾಲನೊಡ್ಡಿತ್ತು.

ವಿಶ್ವದಾಖಲೆಯ ದ್ವಿಶತಕ ಬಾರಿಸಿರುವ ಸಚಿನ್ ವೈಯಕ್ತಿಕವಾಗಿ ಅತ್ಯಧಿಕ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ರೆನಿಸಿಕೊಂಡರು. ಮೈದಾನದ ನಾಲ್ಕು ದಿಕ್ಕುಗಳಿಗೂ ಲೀಲಾಜಾಲವಾಗಿ ಚೆಂಡನ್ನು ಅಟ್ಟಿದ ಸಚಿನ್‌ಗೆ ಸರಿಸಾಟಿಯಾಗಿ ವಿಶ್ವದಲ್ಲಿ ಯಾವ ಬ್ಯಾಟ್ಸ್‌ಮನ್ ಇಲ್ಲವೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಈ ಹಿಂದೆ 1997ರಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಸಯೀದ್ ಅನ್ವರ್ 194 ರನ್ ಗಳಿಸಿದ್ದು ಬ್ಯಾಟ್ಸ್‌ಮನ್ ಒಬ್ಬನಿಂದ ದಾಖಲಾದ ಗರಿಷ್ಠ ಮೊತ್ತವಾಗಿತ್ತು. ನಂತರ ಇದೇ ದಾಖಲೆಯನ್ನು ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆಯ ಚಾರ್ಲ್ಸ್ ಕೊವೆಂಟ್ರಿ ಸರಿಗಟ್ಟಿದ್ದರು.

ಆದರೆ ಇದೀಗ ವಿಶ್ವವನ್ನೇ ನಡುಗಿಸುವ ರೀತಿಯಲ್ಲಿ ಬ್ಯಾಟ್ ಬೀಸಿದ ಸಚಿನ್ 147 ಎಸೆತಗಳಲ್ಲಿ 25 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರುಗಳ ನೆರವಿನಿಂದ ದಾಖಲೆಯ ದ್ವಿಶತಕ ಬಾರಿಸಿದರು.

ನೂರರ ಗಡಿಯನ್ನು 87 ಎಸೆತಗಳಲ್ಲಿ ಪೂರೈಸಿದ ಸಚಿನ್ ನಂತರ ಶತಕದ ದಾಖಲಿಸಲು ಕೇವಲ 60 ಎಸತೆಗಳನ್ನು ತೆಗೆದುಕೊಂಡರು. ಇದು ದಕ್ಷಿಣ ಆಫ್ರಿಕಾ ವಿರುದ್ಧ ಸಚಿನ್ ಬ್ಯಾಟ್‌ನಿಂದ ದಾಖಲಾದ ನಾಲ್ಕನೇ ಹಾಗೂ ಗ್ವಾಲಿಯರ್ ಮೈದಾನದಲ್ಲಿ ದಾಖಲಾದ ಎರಡನೇ ಶತಕವಾಗಿದೆ.

ಅಷ್ಟೇ ಅಲ್ಲದೆ ಒಟ್ಟಾರೆಯಾಗಿ ಅವರಿಗಿದು 93ನೇ ಶತಕದ ಸಂಭ್ರಮ. ಟೆಸ್ಟ್‌ನಲ್ಲಿ ಸಚಿನ್ 47 ಶತಕದ ದಾಖಲೆ ಹೊಂದಿದ್ದಾರೆ.

ಭಾರತ ಇನ್ನಿಂಗ್ಸ್...
ಈ ಮೊದಲು ಟಾಸ್ ಗೆದ್ದ ಭಾರತ ತಂಡದ ನಾಯಕ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಆದರೆ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಓಪನರ್ ವೀರೇಂದ್ರ ಸೆಹ್ವಾಗ್ (9) ವಿಕೆಟ್ ಆತಿಥೇಯರಿಗೆ ಆರಂಭದಲ್ಲೇ ನಷ್ಟವಾಗಿತ್ತು.

ಸಚಿನ್‌ಗೆ ಉತ್ತಮ ಬೆಂಬಲ ನೀಡಿದ ಕಾರ್ತಿಕ್ 85 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 79ರನ್ ಗಳಿಸಿದರು. ಸಚಿನ್-ಕಾರ್ತಿಕ್ ಜೋಡಿ ಮೂರನೇ ವಿಕೆಟ್‌ಗೆ 19.3 ಓವರುಗಳಲ್ಲಿ 194 ರನ್ನುಗಳ ಜೊತೆಯಾಟ ನೀಡಿದರು.

ನಂತರ ಬಂದ ಸ್ಫೋಟಕ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್ ಕೂಡಾ ಕೇವಲ 23 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ ಬಿರುಸಿನ 36 ರನ್ ಗಳಿಸಿದರು.

ಆನಂತರ ಕ್ರೀಸಿಗಿಳಿದ ನಾಯಕ ಮಹೇಂದ್ರ ಸಿಂಗ್ ಧೋನಿ ಕೂಡಾ ಬಿರುಸಿನ ಅರ್ಧಶತಕ ಬಾರಿಸುವ ಮೂಲಕ ತಂಡದ ಮೊತ್ತವನ್ನು 400ರ ಗಡಿ ದಾಟಿಸಿದರು.

ಕೇವಲ 35 ಎಸೆತಗಳನ್ನು ಎದುರಿಸಿದ ಧೋನಿ ಏಳು ಬೌಂಡರಿ ಹಾಗೂ ನಾಲ್ಕು ಭರ್ಜರಿ ಸಿಕ್ಸರ್ ನೆರವಿನಿಂದ ಅಜೇಯ 68 ರನ್ ಗಳಿಸಿದರು.

ಧೋನಿ ಅದೃಷ್ಟದಾಟ...
ಕಳೆದ 16 ಪಂದ್ಯಗಳಲ್ಲಿ ಧೋನಿಗಿದು ನಾಲ್ಕನೇ ಬಾರಿ ಟಾಸ್ ಒಲಿದಿರುವುದು. ಕಳೆದ ಆರು ಪಂದ್ಯಗಳಲ್ಲಿ ನಿರಂತರ ಟಾಸ್ ಕಳೆದುಕೊಂಡಿದ್ದ ಮಹಿ ಈ ಪಂದ್ಯದಲ್ಲಿ ಟಾಸ್ ಗೆಲ್ಲಲು ಸಫಲರಾಗಿದ್ದು, ಸರಣಿ ವಶಪಡಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ