ಧೋನಿ ಪರ ಬ್ಯಾಟಿಂಗ್ ಮಾಡಿದ ಗಾವಸ್ಕರ್, ಅಕ್ರಂ!

ಶನಿವಾರ, 15 ಮೇ 2010 (12:25 IST)
ವೆಸ್ಟ್‌ಇಂಡೀಸ್‌ನ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಎದುರಾದ ತಂಡದ ಹೀನಾಯ ಸೋಲಿನ ನಂತರ ತೀವ್ರ ಒತ್ತಡವನ್ನೆದುರಿಸುತ್ತಿರುವ ಭಾರತದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಮಾಜಿ ಆಟಗಾರರಾದ ಸುನಿಲ್ ಗಾವಸ್ಕರ್ ಮತ್ತು ವಾಸೀಂ ಅಕ್ರಂ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸದ್ಯ ಏಕದಿನ ಹಾಗೂ ಟ್ವೆಂಟಿ-20 ಪ್ರಕಾರದ ನಾಯಕ ಸ್ಥಾನದಿಂದ ಧೋನಿಯನ್ನು ಕೆಳಗಿಳಿಸುವುದು ಅನವಶ್ಯಕವಾದ ಕ್ರಮವಾಗಿರಲಿದೆ ಎಂದವರು ಹೇಳಿದ್ದಾರೆ.

ನಾಯಕನಾಗಿ ಧೋನಿ ಅತ್ಯುತ್ತಮ ನಿರ್ವಹಣೆಯನ್ನೇ ನೀಡಿದ್ದಾರೆ ಎಂದು ಗಾವಸ್ಕರ್ ಖಾಸಗಿ ಟಿ.ವಿ ಚಾನೆಲ್‌ವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಪ್ತಾನಗಿರಿಯನ್ನು ಪರಿಗಣಿಸಿದಾಗ ಧೋನಿಯೇ ಪ್ರಥಮ ಆಯ್ಕೆಯಾಗಿದ್ದಾರೆ. ಅಲ್ಲದೆ ನಾಯಕನಾದ ನಂತರ ಅವರಿಗೆ ಅದೃಷ್ಟವೂ ಸಾಥ್ ನೀಡಿದೆ ಎಂದವರು ವಿವರಿಸಿದರು.

ಒಬ್ಬ ಬ್ಯಾಟ್ಸ್‌ಮನ್ ಆಗಿ ಟೀಮ್ ಇಂಡಿಯಾದಲ್ಲಿ ಧೋನಿ ಸ್ಥಾನ ಭದ್ರವಾಗಿವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಭಾರತದ ಆಟಗಾರ, ತಂಡವು ಸುರಕ್ಷಿತವಾಗಿರುವಾಗ ಯಾರು ಕೂಡಾ ಹಾಗೆ ಯೋಚಿಸಲಾರರು ಎಂದವರು ಹೇಳಿದರು.

ಅದೇ ವೇಳೆ ನಾಯಕ ಸ್ಥಾನದಿಂದ ಧೋನಿಯವರನ್ನು ವಜಾಗೊಳಿಸುವುದು ಉತ್ತಮ ಪರಿಹಾರವಲ್ಲ ಎಂದು ಪಾಕಿಸ್ತಾನ ಮಾಜಿ ಯಶಸ್ವಿ ನಾಯಕ ವಾಸೀಮ್ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

ಧೋನಿ ಪ್ರತಿಭಾವಂತ ನಾಯಕನಾಗಿದ್ದು, ಆದ್ದರಿಂದ ಇಂದೊಂದು ಅವಿವೇಕದ ಕ್ರಮವಾಗಿರಲಿದೆ ಎಂದವರು ಸೇರಿಸಿದರು.

ಮತ್ತೊಂದೆಡೆ ಹೇಳಿಕೆ ನೀಡಿರುವ ಗಾವಸ್ಕರ್, ಆಟಗಾರರನ್ನು ತುರ್ತಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮೆ (ಎನ್‌ಸಿಎ) ಕಳುಹಿಸಿ ತರಬೇತಿ ಕೊಡಿಸಬೇಕು ಎಂದು ಹೇಳಿದ್ದಾರೆ.

ಶಾರ್ಟ್ ಪಿಚ್ ಚೆಂಡುಗಳನ್ನು ಎದುರಿಸುವಲ್ಲಿ ಆಟಗಾರರು ಪರದಾಡುತ್ತಿದ್ದಾರೆ. ಇದುವೇ ವಿಂಡೀಸ್‌ನಲ್ಲಿ ಎದುರಾದ ಹಿನ್ನೆಡೆಗೆ ಕಾರಣ ಎಂದವರು ತಿಳಿಸಿದರು.

ಮಾತು ಮುಂದುವರಿಸಿದ ಅವರು ಐಪಿಎಲ್ ಪಾರ್ಟಿ ತಂಡದ ಹಿನ್ನೆಡೆಗೆ ಕಾರಣ ಎಂಬ ನಾಯಕ ಧೋನಿಯ ವಾದವನ್ನು ಒಪ್ಪಿಕೊಳ್ಳಲು ನಿರಾಕರಿಸಿದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ