ವಿಶ್ವಕಪ್ ವೈಫಲ್ಯ; ಮ್ಯಾನೇಜರ್ ವರದಿ ಸಲ್ಲಿಕೆ

ಶನಿವಾರ, 15 ಮೇ 2010 (17:55 IST)
ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತಕ್ಕೆ ಎದುರಾಗಿರುವ ಹೀನಾಯ ಸೋಲಿಗೆ ಸಂಬಂಧಿಸಿದಂತೆ ತಂಡದ ಮ್ಯಾನೇಜರ್ ರಣಜಿಬ್ ಬಿಸ್ವಾಲ್, ಶನಿವಾರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ವರದಿಯನ್ನು ಸಲ್ಲಿಸಿದ್ದು, ಫಿಟ್‌ನೆಸ್ ಹಾಗೂ ಶಿಸ್ತು ವಿವಾದಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ವರದಿಯಲ್ಲಿ ಕೆಲವೊಂದು ವಿಷಯಗಳ ಬಗ್ಗೆ ಮಂಡಳಿಗೆ ಶಿಫಾರಸು ಮಾಡಿದ್ದೇನೆ ಎಂದು ಬಿಸ್ವಾಲ್ ತಿಳಿಸಿದ್ದಾರೆ.

ಕೆರೆಬಿಯನ್ ದ್ವೀಪ ರಾಷ್ಟ್ರದಲ್ಲಿ ನಡೆದ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಸೆಮಿಫೈನಲ್‌ಗೂ ತಲುಪುವಲ್ಲಿ ವಿಫಲವಾಗಿತ್ತು.

ವಿಶ್ವಕಪ್‌ ಬಗ್ಗೆ ನಾನು ವರದಿ ಸಲ್ಲಿಸಿದ್ದೇನೆ. ಬಿಸಿಸಿಐ ಈ ಬಗ್ಗೆ ಪ್ರತಿಕ್ರಿಯೆ ನೀಡಲಿದೆ ಎಂದವರು ತಿಳಿಸಿದರು.

ಮೂಲಗಳ ಪ್ರಕಾರ ಬಿಸ್ವಾಲ್ ತಂಡದ ಫಿಟ್‌ನೆಸ್, ಶಿಸ್ತು ಹಾಗೂ ಶಾರ್ಟ್ ಬಾಲ್‌ಗಳನ್ನು ಎದುರಿಸುವಲ್ಲಿ ತೊಂದರೆ ಅನುಭವಿಸುತ್ತಿರುವುದರ ಬಗ್ಗೆ ವರದಿ ಮಾಡಿದ್ದಾರೆ ಎಂದು ಹೇಳಿದ್ದಾರೆ.

ವಿಂಡೀಸ್‌ನಲ್ಲಿ ಏನು ನಡೆದಿತ್ತು ಎಂಬುದರ ಬಗ್ಗೆ ವರದಿಯಲ್ಲಿ ವಿವರಣೆ ಮಾಡಲಾಗಿದೆ. ಅಲ್ಲದೆ ಬೌನ್ಸಿ ಪಿಚ್‌ಗಳಲ್ಲಿ ಹೆಚ್ಚಿನ ಪಂದ್ಯಗಳನ್ನು ಆಡಬೇಕು ಎಂದು ಸಲಹೆ ಮಾಡಲಾಗಿದೆ. ಅಷ್ಟೇ ಅಲ್ಲದೆ ಆಟಗಾರರ ಫಿಟ್‌ನೆಸ್ ಮತ್ತು ಶಿಸ್ತಿನ ಬಗ್ಗೆ ವರದಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಅದೇ ವೇಳೆ ವೀಂಡೀಸ್‌ನ ಪಬ್‌ನಲ್ಲಿ ಆಟಗಾರರು ಜಗಳಕ್ಕೆ ನಿಂತಿದ್ದರು ಎಂಬ ವರದಿಯನ್ನು ಮ್ಯಾನೇಜರ್ ಬಿಸ್ವಾಲ್ ಮತ್ತೊಮ್ಮೆ ನಿರಾಕರಿಸಿದರು.

ಕೋಚ್ ಗ್ಯಾರಿ ಕರ್ಸ್ಟನ್ ಕೂಡಾ ತಮ್ಮ ವರದಿಯನ್ನು ಪ್ರತ್ಯೇಕವಾಗಿ ಮಂಡಳಿಗೆ ಸಲ್ಲಿಸಲಿದ್ದು, ಆಟಗಾರರ ಫಿಟ್‌ನೆಸ್ ಹಾಗೂ ಬದ್ಧತೆ ಬಗ್ಗೆ ಅಸಂತೃಪ್ತಿ ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ