ಮುಗ್ಗರಿಸಿದ ಆಸೀಸ್; ಇಂಗ್ಲೆಂಡ್ ಮಡಿಲಿಗೆ ಟ್ವೆಂಟಿ-20 ವಿಶ್ವಕಪ್

ಸೋಮವಾರ, 17 ಮೇ 2010 (10:47 IST)
PTI
PTI
ದಕ್ಷಿಣ ಆಫ್ರಿಕಾ ಮೂಲದ ಬ್ಯಾಟ್ಸ್‌ಮನ್ ಕ್ರೆಗ್ ಕೀಸ್‌ವೆಟ್ಟರ್ (63) ಮತ್ತು ಕೆವಿನ್ ಪೀಟರ್‌ಸನ್ (47) ಅದ್ಭುತ ಇನ್ನಿಂಗ್ಸ್ ನೆರವಿನಿಂದ ಇಂಗ್ಲೆಂಡ್ ತಂಡವು ಇಲ್ಲಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ನಡೆದ ಟ್ವೆಂಟಿ-20 ವಿಶ್ವಕಪ್ ಫೈನಲ್ ಪಂದ್ಯವನ್ನು ಏಳು ವಿಕೆಟುಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದ್ದು, ಚಾಂಪಿಯನ್‌ಶಿಪ್ ಮುಡಿಗೇರಿಸಿಕೊಂಡಿದೆ.

ಆ ಮೂಲಕ ಇಂಗ್ಲೆಂಡ್ ಚೊಚ್ಚಲ ಬಾರಿಗೆ ಐಸಿಸಿ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತ್ತು. ಈ ಮೊದಲು ಇಂಗ್ಲೆಂಡ್ ತಂಡದವರು 1979, 1987 ಹಾಗೂ 1992ರ ಏಕದಿನ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದರು. ಆದರೆ ಪ್ರಶಸ್ತಿ ಎತ್ತಲು ಸಾಧ್ಯವಾಗಿರಲಿಲ್ಲ.

ನಂತರ 2004ರ ಚಾಂಪಿಯನ್ ಟ್ರೋಫಿ ಫೈನಲ್ ತಲುಪಿದ್ದ ಇಂಗ್ಲೆಂಡ್ ಅಲ್ಲಿಯೂ ಮುಗ್ಗರಿಸಿತ್ತು. ಆದರೆ ಈ ಬಾರಿ ಯಶಸ್ಸಿನ ಮೆಟ್ಟಿಲೇರಿರುವ ಪಾಲ್ ಕಾಲಿಂಗ್‌ವುಡ್ ಪಡೆ ಪ್ರಮುಖ ಐಸಿಸಿ ಟೂರ್ನಿಯೊಂದರ ಚಾಂಪಿಯನ್ ಪಟ್ಟ ಆಲಂಕರಿಸಿದೆ.

ಟೂರ್ನಿಯುದ್ಧಕ್ಕೂ ಅಮೋಘ ಪ್ರದರ್ಶನ ನೀಡಿದ್ದ 'ಆಶಶ್ ತಂಡಗಳು' ಅದ್ಬುತವಾಗಿಯೇ ಫೈನಲ್‌ಗೆ ಲಗ್ಗೆಯಿಟ್ಟಿದ್ದವು. ಆದರೆ ಪ್ರಶಸ್ತಿ ಹಣಾಹಣಿಯಲ್ಲಿ ಸಾಂಘಿಕ ಹೋರಾಟ ಪ್ರದರ್ಶಿಸಿದ ಆಂಗ್ಲ ಪಡೆ ನಿಜಕ್ಕೂ ಶ್ರೇಷ್ಠ ಕ್ರಿಕೆಟ್ ಪ್ರದರ್ಶಿಸಿತು.

PTI
ಇದರೊಂದಿಗೆ ಏಕದಿನ ಹಾಗೂ ಟೆಸ್ಟ್‌ನಲ್ಲಿ ಅನೇಕ ಬಾರಿ ಸಾಮ್ರಾಟ್ ಎನಿಸಿಕೊಂಡಿದ್ದ ಆಸೀಸ್‌ಗೆ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಈ ಸ್ಥಾನ ಪಡೆಯಲು ಇನ್ನೂ ಕೆಲವು ಕಾಲ ಕಾಯಬೇಕಾದ ಸ್ಥಿತಿ ಬಂದೊದಗಿದೆ.

ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರ ಸರಿಯೆನಿಸಿಕೊಂಡಂತೆ ಆಸೀಸ್‌ಗೆ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಶೇನ್ ವಾಟ್ಸನ್ ಮತ್ತು ಡೇವಿಡ್ ವಾರ್ನರ್ ತಲಾ ಎರಡು ರನ್ ಗಳಿಸಿ ನಿರ್ಗಮಿಸಿದರೆ ಬ್ರಾಡ್ ಹಡ್ಡಿನ್ (1) ನಿರಾಸೆ ಮೂಡಿಸಿದರು.

ಒಂದು ಹಂತದಲ್ಲಿ ಆಸೀಸ್ ಎಂಟು ರನ್ನುಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ನಾಯಕ ಮೈಕಲ್ ಕ್ಲಾರ್ಕ್ (27) ಸ್ವಲ್ಪ ಪ್ರತಿರೋಧ ನೀಡಿದರೂ ಹೆಚ್ಚು ಹೊತ್ತು ಸಾಗಲಿಲ್ಲ.

ನಂತರ ಬಂದ ಕ್ಯಾಮರೂನ್ ವೈಟ್ (30) ಬಿರುಸಿನ ಆಟ ಪ್ರದರ್ಶಿಸುವ ಮೂಲಕ ತಂಡವನ್ನು ಉತ್ತಮ ಮೊತ್ತದತ್ತ ಮುನ್ನೆಡೆಸಿದರು.

ಒಂದು ಬದಿಯಿಂದ ಇಂಗ್ಲಿಂಷ್ ಬೌಲರುಗಳನ್ನು ದಿಟ್ಟವಾಗಿ ಎದುರಿಸಿದ ಡೇವಿಡ್ ಹಸ್ಸಿ ಆಕರ್ಷಕ ಅರ್ಧಶತಕ (59) ದಾಖಲಿಸುವ ಮೂಲಕ ಸವಾಲಿನ ಮೊತ್ತ ದಾಖಲಿಸುವಲ್ಲಿ ನೆರವಾದರು. ಅಂತಿಮವಾಗಿ ಬಂದ ಸೆಮಿಫೈನಲ್ ಹೀರೊ ಮೈಕಲ್ ಹಸ್ಸಿ ಅಜೇಯ 17 ರನ್ ಗಳಿಸಿದರು.

PTI
ಒಟ್ಟಾರೆಯಾಗಿ ನಿಗದಿತ ಓವರುಗಳಲ್ಲಿ ಆಸೀಸ್ ಆರು ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮಕಾರಿ ದಾಳಿ ಸಂಘಟಿಸಿದ ಸೈಡ್‌ಬಾಟಮ್ ಎರಡು ಹಾಗೂ ಗ್ರೇಮ್ ಸ್ವಾನ್ ಮತ್ತು ಲುಕ್ ರೈಟ್ ತಲಾ ಒಂದು ವಿಕೆಟ್ ಕಿತ್ತರು.

ನಂತರ 148ರ ಸವಾಲನ್ನು ಬೆನ್ನತ್ತಿದ ಇಂಗ್ಲೆಂಡ್ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಮೈಕಲ್ ಲಾಂಬ್ (2)ರನ್ನು ಆರಂಭದಲ್ಲೇ ಕಳೆದುಕೊಂಡಿತು.

ಆದರೆ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ಮುಂದುವರಿಸಿರುವ ಕೆವಿನ್ ಪೀಟರ್‌ಸನ್ ಎದುರಾಳಿಗೆ ಮತ್ತೊಮ್ಮೆ ಕಂಟಕವಾದರು. ಪೀಟರ್‌ಸನ್ ಹಾಗೂ ಕೀಸ್‌ವೆಟ್ಟರ್ ದ್ವಿತೀಯ ವಿಕೆಟ್‌ಗೆ 111 ರನ್ನುಗಳ ಜತೆಯಾಟ ಒದಗಿಸುವ ಮೂಲಕ ತಂಡಕ್ಕೆ ಐತಿಹಾಸಿಕ ಜಯ ಒದಗಿಸಿಕೊಟ್ಟರು.

49 ಎಸೆತಗಳನ್ನು ಎದುರಿಸಿದ ಕೀಸ್‌ವೆಟ್ಟರ್ 63 ರನ್ ಗಳಿಸಿದರು. ಅದೇ ರೀತಿ ಕೆವಿನ್ 31 ಎಸೆತಗಳಲ್ಲಿ 47 ರನ್ ಗಳಿಸಿದರು.

ಅಂತಿಮವಾಗಿ ಬಂದ ನಾಯಕ ಕಾಲಿಂಗ್‌ವುಡ್ ಸಹ ಅಜೇಯ 12 ರನ್ ಗಳಿಸುವ ಮೂಲಕ ತಂಡಕ್ಕೆ ಜಯ ಒದಗಿಸಿಕೊಟ್ಟರು.

ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಕೆವಿನ್ ಪೀಟರ್‌ಸನ್ ಸರಣಿಶ್ರೇಷ್ಠ ಹಾಗೂ ಕ್ರೆಗ್ ಕೀಸ್‌ವೆಟ್ಟರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರಾದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ