ಧೋನಿಗೆ ಕ್ಲೀನ್‌ಚಿಟ್; ನಾಲ್ವರು ಆಟಗಾರರ ವಿರುದ್ಧ ಶಿಸ್ತು ಕ್ರಮ?

ಸೋಮವಾರ, 17 ಮೇ 2010 (17:05 IST)
ವೆಸ್ಟ್ಇಂಡೀಸ್‌ನಲ್ಲಿ ನಡೆದ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ಹಿನ್ನಲೆಯಲ್ಲಿ ತಂಡದ ಕೆಲವು ಆಟಗಾರರ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಯುವರಾಜ್ ಸಿಂಗ್, ರೋಹಿತ್ ಶರ್ಮಾ, ಆಶಿಶ್ ನೆಹ್ರಾ ಮತ್ತು ರವೀಂದ್ರ ಜಡೇಜಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಸಿಸಿಐ ಮುಂದಾಗಿದೆ. ಟೀಂ ಇಂಡಿಯಾದ ನಾಲ್ವರು ಆಟಗಾರರಿಗೆ ಬಿಸಿಸಿಐ ಕೊಕ್ ನೀಡಲಿದೆ ಎಂದು ಮೂಲಗಳು ಹೇಳಿವೆ.

ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಮಂಡಳಿಯು ಕ್ಲೀನ್‌ಚಿಟ್ ನೀಡಿದೆ. ನಾಯಕನ ಪ್ರಾಮಾಣಿಕತೆಯ ಬಗ್ಗೆ ಯಾವುದೇ ಪ್ರಶ್ನೆಯನ್ನೆತ್ತಲು ಮಂಡಳಿ ಮುಂದಾಗಿಲ್ಲ.

ಆಟಗಾರರ ನಡವಳಿಕೆ ಬಗ್ಗೆ ಬಿಸಿಸಿಐ ಆಕ್ಷೇಪವೆತ್ತಿದೆ. ಅಲ್ಲದೆ ಫಿಟ್‌ನೆಸ್ ಸಮಸ್ಯೆಯು ಕೂಡಾ ಈ ಆಟಗಾರರಿಗೆ ಮುಳುವಾಗಿ ಪರಿಣಮಿಸಿದೆ.

ಬಿಸಿಸಿಐನ ಉನ್ನತ ಅಧಿಕಾರಿಗಳೊಂದಿಗೆ ತಂಡದ ಮ್ಯಾನೇಜರ್ ಇಂದು (ಸೋಮವಾರ) ಬೆಳಗ್ಗೆ ಚರ್ಚೆ ನಡೆಸಿದ್ದರು. ವಿಶ್ವಕಪ್‌ನಲ್ಲಿ ತಂಡದ ಕೆಲವು ಆಟಗಾರರ ಪ್ರದರ್ಶನದ ಬಗ್ಗೆ ಬಿಸಿಸಿಐ ಅಸಂತೃಪ್ತಿ ಹೊಂದಿದೆ.

ಅಲ್ಲದೆ ಶಿಸ್ತು ಕ್ರಮಕ್ಕೆ ಒಳಗಾಗಲಿರುವ ಆಟಗಾರರ ವಿರುದ್ಧ ಶೋಕಾಸ್ ನೋಟಿಸ್ ಜಾರಿಗೊಳಿಸುವ ಕುರಿತಾಗಿಯೂ ಬಿಸಿಸಿಐ ಆಲೋಚಿಸುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಏಷ್ಯಾ ಕಪ್‌ಗಿಂತ ಮುಂಚಿತವಾಗಿ ನಡೆಯಲಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ವೆಬ್ದುನಿಯಾವನ್ನು ಓದಿ