ಹೂಸ ಲುಕ್‌ನಲ್ಲಿರುವ ಗೌತಮ್ ಗಂಭೀರ್ ಸಾರಥ್ಯದ ಟೀಮ್ ಇಂಡಿಯಾವು ಇಲ್ಲಿನ ನೆಹರೂ ಮೈದಾನದಲ್ಲಿ ಶುಕ್ರವಾರ ಮೈದಾನದ ನಂತರ ಅಭ್ಯಾಸ ಆರಂಭಿಸಿತ್ತು. ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವು ಭಾನುವಾರ ನಡೆಯಲಿದೆ.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಭಾರತದ ದ್ವಿತೀಯ ದರ್ಜೆಯ ತಂಡವನ್ನು ಮುನ್ನೆಡೆಸುವ ಅವಕಾಶವನ್ನು ಗಂಭೀರ್ ಪಡೆದಿದ್ದಾರೆ. ನೆಮ್ಮದಿಯಿಂದ ಕಂಡುಬಂದಿದ್ದ ಗಂಭೀರ್, ಕೋಚ್ ಗ್ಯಾರಿ ಕರ್ಸ್ಟನ್ ಮತ್ತು ಬೌಲಿಂಗ್ ಕೋಚ್ ಗ್ಯಾರಿ ಸಿಮನ್ಸ್ ನೇತೃತ್ವದಲ್ಲಿ ಯುವ ಆಟಗಾರರಿಗೆ ತರಬೇತಿ ನೀಡಿದರು.
ತಂಡದ ಹಿರಿಯ ಆಟಗಾರಾದ ಯುವರಾಜ್ ಸಿಂಗ್, ಎಸ್. ಶ್ರೀಶಾಂತ್ ಮತ್ತು ಮುರಳಿ ವಿಜಯ್ ತಂಡವನ್ನು ಸಂಜೆಯ ಹೊತ್ತಿಗೆ ಸೇರಿಕೊಂಡಿದ್ದು, ಹೀಗಾಗಿ ಅಭ್ಯಾಸದಲ್ಲಿ ಪಾಲ್ಗೊಳ್ಳಲಿಲ್ಲ.
ಆದರೆ ಕಳೆದ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣ ಏಕದಿನದಲ್ಲಿ ಅಮೋಘ ಶತಕ ಬಾರಿಸುವ ಮೂಲಕ ತಂಡದ ಗೆಲುವಿಗೆ ಕಾರಣರಾಗಿದ್ದ ವಿರಾಟ್ ಕೊಹ್ಲಿ ಅವರು ಯುವ ಎಡಗೈ ಬ್ಯಾಟ್ಸ್‌ಮನ್ ಸೌರಭ್ ತಿವಾರಿ ಜತೆ ಸೇರಿಕೊಂಡು ನೆಟ್ಸ್‌ನಲ್ಲಿ ಕಠಿಣ ಅಭ್ಯಾಸ ನಡೆಸಿದರು.
ಅದೇ ರೀತಿ ಪ್ರವೀಣ್ ಕುಮಾರ್ ಜಾಗದಲ್ಲಿ ಕಾಣಿಸಿಕೊಂಡಿದ್ದ ಆಶಿಶ್ ನೆಹ್ರಾ ಬೌಲಿಂಗ್ ಅಭ್ಯಾಸ ನಡೆಸಿದರು. ನಂತರ ಕೆಲಹೊತ್ತು ಬ್ಯಾಟಿಂಗ್ ಕೂಡಾ ನಡೆಸಿದರು. ಭಾನುವಾರ ನಡೆಯಲಿರುವ ಮೊದಲ ಏಕದಿನದಲ್ಲಿ ನೆಹ್ರಾ ಜತೆ ಕೇರಳ ವೇಗಿ ಎಸ್. ಶ್ರೀಶಾಂತ್ ಬೌಲಿಂಗ್ ಹಂಚಿಕೊಳ್ಳುವ ಸಾಧ್ಯತೆಯಿದೆ.
ಮತ್ತೊಂದೆಡೆ ಏಕದಿನದಲ್ಲಿ ಪಾದರ್ಪಣೆ ಮಾಡಲು ತುದಿಗಾಲಲ್ಲಿ ನಿಂತಿರುವ ವೃದ್ದೀಮಾನ್ ಸಹಾ ಕೂಡಾ ಕೀಪಿಂಗ್ ಸಹಿತ ಬ್ಯಾಟಿಂಗ್ ಅಭ್ಯಾಸ ನಡೆಸಿದರು. ನಾನು ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಸಿದ್ಧನಿದ್ದೇನೆ. ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ನಾನು ನನ್ನ ರಾಜ್ಯಕ್ಕಾಗಿ ಅಥವಾ ಕ್ಲಬ್‌ಗಾಗಿ ಯಾವ ರೀತಿ ಆಡುತ್ತೇನೊ ಅದೇ ರೀತಿಯ ಆಟ ಮುಂದುವರಿಸಲಿದ್ದೇನೆ ಎಂದು ಅಸ್ಸಾಂ ವಿರುದ್ಧ ರಣಜಿ ಪಂದ್ಯದಲ್ಲಿ 178 ರನ್ ಬಾರಿಸಿದ ಈ ಬಂಗಾಳ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನುಡಿದರು.
ಭಾರತೀಯ ತಂಡ ಶನಿವಾರ ಕೂಡಾ ಅಭ್ಯಾಸ ಮುಂದುವರಿಸಲಿದೆ. ಹಿರಿಯ ಆಟಗಾರರಾದ ನಾಯಕ ಮಹೇಂದ್ರ ಸಿಂಗ್ ಧೋನಿ, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಜಹೀರ್ ಖಾನ್ ಮತ್ತು ಹರಭಜನ್ ಸಿಂಗ್ ಅವರಿಗೆ ವಿಶ್ರಾಂತಿ ಕಲ್ಪಿಸಲಾಗಿದೆ.