ಭಾರತ ತಂಡದ ಯಶಸ್ವಿ ಕೋಚ್ ಗ್ಯಾರಿ ಕರ್ಸ್ಟನ್ ಒಪ್ಪಂದ ಮುಂಬರುವ ಏಕದಿನ ವಿಶ್ವಕಪ್ ನಂತರ ಕೊನೆಗೊಳ್ಳಲಿದೆ. ಗ್ಯಾರಿ ಒಪ್ಪಂದ ಕೊನೆಗೊಳ್ಳುತ್ತಿದ್ದಂತೆಯೇ ಅವರ ಸೇವೆ ಪಡೆಯಲು ದಕ್ಷಿಣ ಆಫ್ರಿಕಾ ತುದಿಗಾಲಲ್ಲಿ ನಿಂತಿದೆ. ಆದರೆ ಕರ್ಸ್ಟನ್ ಅಪೇಕ್ಷಿಸುವಷ್ಟು ಹಣ ನೀಡಲು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಗೆ ಸಾಧ್ಯವಾಗದು (ಸಿಎಸ್‌ಎ) ಎಂದು ವರದಿಗಳು ಹೇಳಿವೆ.
ಪ್ರಾಯೋಜಕತ್ವ ಸಮಸ್ಯೆಯೇ ಇದಕ್ಕೆ ಪ್ರಮುಖ ಕಾರಣವೆನ್ನಲಾಗಿದೆ. ದಕ್ಷಿಣ ಆಫ್ರಿಕಾ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದ್ದ ಸ್ಟಾಂಡರ್ಡ್ ಬ್ಯಾಂಕ್ ಇದೀಗ ಪ್ರಾಯೋಜನೆ ನಿಲ್ಲಿಸಿರುವುದು ಹಿನ್ನೆಡೆಗೆ ಕಾರಣವಾಗಿದೆ.
ಭಾರತದ ಯಶಸ್ಸಿನಲ್ಲಿ ಮಹಾನ್ ಪಾತ್ರ ನಿರ್ವಹಿಸಿರುವ ಕರ್ಸ್ಟನ್ ನೇಮಕಕ್ಕೆ ದಕ್ಷಿಣ ಆಫ್ರಿಕಾ ಅತೀವ ಉತ್ಸುಕತೆ ತೋರುತ್ತಿದೆ. ಆದರೆ ಭಾರತ ಮಂಡಳಿಯಿಂದ ಭಾರಿ ಮೊತ್ತ ಪಡೆಯುತ್ತಿರುವ ಕರ್ಸ್ಟನ್‌ರನ್ನು ಪಡೆಯಲು ಸಿಎಸ್‌ಎಗೆ ಪ್ರಾಯೋಜಕತ್ವ ಸಮಸ್ಯೆ ಎದುರಾಗುತ್ತಿದೆ ಎಂದು ವರದಿಗಳು ಹೇಳಿವೆ.
ಆದರೆ ಈ ಬಗ್ಗೆ ಕರ್ಸ್ಟನ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಮತ್ತೊಂದೆಡೆ ತಂಡದ ಆಟಗಾರರ ಬಲವಾದ ಬೇಡಿಕೆಯ ಹಿನ್ನೆಲೆಯಲ್ಲಿ ಗ್ಯಾರಿ ಜತೆಗಿನ ಒಪ್ಪಂದ ಮುಂದುವರಿಸಲು ಬಿಸಿಸಿಐ ಕೂಡಾ ಚಿಂತನೆ ನಡೆಸುತ್ತಿದೆ.