ಆಟಗಾರರೊಂದಿಗೆ ದ. ಆಫ್ರಿಕಾಗೆ ಬೇಗನೆ ತೆರಳಲಿರುವ ಗ್ಯಾರಿ

ಶನಿವಾರ, 27 ನವೆಂಬರ್ 2010 (18:33 IST)
ಮುಂಬರುವ ದಕ್ಷಿಣ ಆಫ್ರಿಕಾ ಮಹತ್ವದ ಸರಣಿಯ ಗಮನದಲ್ಲಿಟ್ಟುಕೊಂಡು ತಂಡದ ಪ್ರಮುಖ ಆಟಗಾರರ ಜತೆ ಕೋಚ್ ಗ್ಯಾರಿ ಕರ್ಸ್ಟನ್ ಕೂಡಾ ಬೇಗನೆ ಪ್ರವಾಸ ಬೆಳೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದರಿಂದಾಗಿ ನ್ಯೂಜಿಲೆಂಡ್ ವಿರುದ್ಧದ ಕೊನೆಯ ಎರಡು ಪಂದ್ಯಗಳಲ್ಲಿ ತಂಡದ ಕೋಚ್ ಹುದ್ದೆಯನ್ನು ಬೌಲಿಂಗ್ ಕೋಚ್ ಆಗಿರುವ ಎರಿಕ್ ಸಿಮನ್ಸ್ ವಹಿಸಲಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

8-10 ಆಟಗಾರರ ಜತೆ ಕರ್ಸ್ಟನ್ ಕೂಡಾ ದಕ್ಷಿಣ ಆಫ್ರಿಕಾ ಬೇಗನೆ ಹೊರಡಲಿದ್ದಾರೆ ಎಂದು ಬಿಸಿಸಿಐ ಅಧಿಕೃತ ವರದಿಗಳು ತಿಳಿಸಿವೆ. ನಾಯಕ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್, ಜಹೀರ್ ಖಾನ್, ಚೇತೇಶ್ವರ ಪೂಜಾರ ಮತ್ತು ಜೈದೇವ್ ಪೂಜಾರ ನಿಗದಿತ ಅವಧಿಗಿಂತ ಬೇಗನೇ ಪ್ರಯಾಣ ಬೆಳೆಸಲಿದ್ದಾರೆ.

ಇವರಿಗೆ ಆಲ್‌ರೌಂಡರ್ ಸುರೇಶ್ ರೈನಾ ಕೂಡಾ ಸಾಥ್ ನೀಡುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ವಿರುದ್ಧದ ಅಂತಿಮ ಎರಡು ಏಕದಿನಗಳಿಗೆ ರೈನಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಇತ್ತೀಚೆಗಷ್ಟೇ ರೈನಾ ಅವರ ವಿಪರೀತ ಕೆಲಸದೊತ್ತಡದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ನಾಯಕ ಧೋನಿ, ಈ ಯುವ ಆಟಗಾರನಿಗೆ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಿದ್ದರು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಮಾನಸಿಕ ದಣಿವು ರೈನಾ ವೈಫಲ್ಯಕ್ಕೆ ಕಾರಣವಾಗಿತ್ತು ಎಂದು ಧೋನಿ ಹೇಳಿದ್ದರು.

ಏಳು ಆಟಗಾರರು ಡಿಸೆಂಬರ್ 6ರಂದು ದಕ್ಷಿಣ ಆಫ್ರಿಕಾಗೆ ಹೊರಡಲಿದ್ದಾರೆ. ಇದಾದ ಎರಡು ದಿನಗಳ ನಂತರ ನಾಯಕ ಧೋನಿ ಮತ್ತು ಹರಭಜನ್ ಅಲ್ಲಿಗೆ ವಿಮಾನವನ್ನೇರಲಿದ್ದಾರೆ. ರೈನಾ ಕೂಡಾ ಇವರ ಜತೆ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.

ಆರಂಭದಲ್ಲಿ ಕೇಪ್‌ಟೌನ್‌ನಲ್ಲಿರುವ ಕೋಚ್ ಕರ್ಸ್ಟನ್ ಅಕಾಡೆಮಿನಲ್ಲಿ ತರಬೇತಿ ನಡೆಸಲಿರುವ ಆಟಗಾರರು ನಂತರ ಜೋಹಾನ್ಸ್‌ಬರ್ಗ್‌ಗೆ ತೆರಳಲಿದ್ದು, ತಂಡದ ಉಳಿದ ಆಟಗಾರರೊಂದಿಗೆ ಸೇರಿಕೊಳ್ಳಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಅಂತ್ಯಗೊಂಡ ಎರಡು ದಿನಗಳ ನಂತರ ಡಿಸೆಂಬರ್ 12ರಂದು ಉಳಿದ ಆಟಗಾರರು ಅಲ್ಲಿಗೆ ತೆರಳಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡಿಸೆಂಬರ್ 16ರಂದು ಸೆಂಚುರಿಯನ್‌ನಲ್ಲಿ ಆರಂಭವಾಗಲಿದೆ.

ಈ ಹಿಂದೆ ದಕ್ಷಿಣ ಆಫ್ರಿಕಾ ವಾತಾವರಣಕ್ಕೆ ಹೊಂದಿಕೊಳ್ಳುವ ಹಾಗೂ ಅಗ್ರಪಟ್ಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತಂಡದ ಅಗ್ರ ಆಟಗಾರರನ್ನು ಬೇಗನೇ ಕಳುಹಿಸಿಬೇಕು ಎಂದು ಕೋಚ್ ಗ್ಯಾರಿ ಕರ್ಸ್ಟನ್ ವಿನಂತಿ ಮಾಡಿದ್ದರು. ಇದಕ್ಕೆ ಮಂಡಳಿ ಒಪ್ಪಿಗೆ ಸೂಚಿಸಿತ್ತು.

ಭಾರತ ಯಾವುದೇ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳದಿರುವ ಹಿನ್ನೆಲೆಯಲ್ಲಿ ಕೋಚ್ ಈ ಮನವಿಯನ್ನು ಮಾಡಿದ್ದರು. ಟೆಸ್ಟ್‌ನಲ್ಲಿ ಅಗ್ರ ಎರಡು ಸ್ಥಾನದಲ್ಲಿರುವ ತಂಡಗಳ ನಡುವಣ ಹೋರಾಟವಾಗಿರುವುದರಿಂದ ಸರಣಿಯು ಸಹಜವಾಗಿಯೇ ಮಹತ್ವ ಗಿಟ್ಟಿಸಿಕೊಂಡಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ವೆಬ್ದುನಿಯಾವನ್ನು ಓದಿ