ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ವಜಾಗೊಳಿಸಿರುವ ಬಿಸಿಸಿಐ ನಿರ್ಧಾರವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ಶಿಲ್ಪಾ ಶೆಟ್ಟಿ ಸಹ ಮಾಲಿಕತ್ವದ ರಾಜಸ್ತಾನದ ರಾಯಲ್ಸ್ ತಂಡಕ್ಕೆ ತಾತ್ಕಾಲಿಕ ಜಯ ಲಭಿಸಿದೆ.
ಪ್ರಕರಣದ ಮಧ್ಯಸ್ಥಿಕೆ ವಹಿಸಿದ್ದ ಸ್ವತಂತ್ರ ನ್ಯಾಯಾಧೀಶರು ಬಿಸಿಸಿಐ ನೀಡಿದ್ದ ತೀರ್ಪಿಗೆ ಆರು ವಾರಗಳ ಕಾಲ ತಾತ್ಕಾಲಿಕ ತಡೆ ಒಡ್ಡಿದೆ. ಇಷ್ಟೇ ಯಾಕೆ ಜನವರಿ 9ರಂದು ಐಪಿಎಲ್ ಮುಂದಿನ ಆವೃತ್ತಿಗಾಗಿ ನಡೆಯಲಿರುವ ಹರಾಜಿನಲ್ಲೂ ಭಾಗವಹಿಸಬಹುದೆಂಬ ತೀರ್ಪನ್ನು ನೀಡಿದೆ. ಇದರಿಂದಾಗಿ ರಾಜಸ್ತಾನ ರಾಯಲ್ಸ್ ತಂಡ ನಿಟ್ಟುಸಿರು ಬಿಡುವಂತಾಗಿದೆ.
ಐಪಿಎಲ್ ಫ್ರಾಂಚೈಸಿ ನಿಯಮ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿದಂತೆ ರಾಜಸ್ತಾನ ರಾಯಲ್ಸ್ ಸೇರಿದಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಉಚ್ಛಾಟಿಸಲು ಅಕ್ಟೋಬರ್ 10ರಂದು ಬಿಸಿಸಿಐ ನಿರ್ಧಾರ ತೆಗೆದುಕೊಂಡಿತ್ತು. ಇದರ ವಿರುದ್ಧ ರಾಜಸ್ತಾನ ತಂಡ ಬಾಂಬೆ ಹೈಕೋರ್ಟ್ ಮೆಟ್ಟಿಲು ಹತ್ತಿತ್ತು.
ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವಂತೆಯೇ ನ್ಯಾಯಾಧೀಶ ಬಿ.ಎನ್. ಶ್ರೀಕೃಷ್ಣ ಮಧ್ಯಸ್ಥಿಕೆಯ ಮೂಲಕ ಒಮ್ಮತದ ನಿರ್ಧಾರ ತಳೆಯುವುದಾಗಿ ಮಂಡಳಿ ಮತ್ತು ರಾಜಸ್ತಾನ ತಿಳಿಸಿತ್ತು. ಇದೀಗ ಪ್ರಕರಣದ ಮಧ್ಯಸ್ಥಿಕೆ ನಡೆಸಿರುವ ನ್ಯಾಯಾಧೀಶರು ರಾಜಸ್ತಾನ ತಂಡದ ಪರ ತೀರ್ಪನ್ನು ನೀಡಿದ್ದು, ಎಂದಿನಂತೆ ಐಪಿಎಲ್ ಫ್ರಾಂಚೈಸಿಯಾಗಿ ಮುಂದುವರಿಯುವಂತೆ ಸಲಹೆ ನೀಡಿದೆ.
ತಂಡವನ್ನು ತೆಗೆದು ಹಾಕಿರುವ ಬಿಸಿಸಿಐ ನಿರ್ಧಾರ ಕಾನೂನಾತ್ಮಕವಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ರಾಜಸ್ತಾನ ತಂಡದ ಸಹ ಮಾಲಕಿ ಹಾಗೂ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರಿಗೆ ತಾತ್ಕಾಲಿಕ ಪರಿಹಾರ ದೊರಕಿದಂತಾಗಿದೆ.