ವಿರಾಟ್ ಕೊಹ್ಲಿ ಅವರ ಸ್ಥಿರ ಪ್ರದರ್ಶನ ಮತ್ತು ದೃಷ್ಟಿಕೋನದಿಂದ ಅತ್ಯಂತ ಪ್ರಭಾವಿತರಾಗಿರುವ ಪಾಕಿಸ್ತಾನದ ಮಾಜಿ ನಾಯಕ ವಾಸೀಮ್ ಅಕ್ರಂ, ಇದೇ ರೀತಿ ಕಠಿಣ ಪರಿಶ್ರಮವನ್ನು ಮುಂದುವರಿಸಿದ್ದಲ್ಲಿ ಭವಿಷ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.
ಏಕದಿನದಲ್ಲಿ ಕೊಹ್ಲಿ ಪ್ರದರ್ಶನ ಅತ್ಯುತ್ತಮವಾಗಿದೆ. ಆದರೆ ಇದೀಗ ತೇರ್ಗಡೆ ಹೊಂದುವ ಸಮಯ ಬಂದಿದೆ. ಒಬ್ಬ ಸಚಿನ್, ಒಬ್ಬ ದ್ರಾವಿಡ್ ಮತ್ತು ಒಬ್ಬ ಲಕ್ಷ್ಮಣ್‌ನಂತಾಗಲು ಏನು ಬೇಕು ಎಂಬುದನ್ನು ವಿರಾಟ್ ಕೊಹ್ಲಿ ಯಾವಾಗಲೂ ತನ್ನ ತಲೆಯಲ್ಲಿ ಇಟ್ಟುಕೊಳ್ಳಬೇಕು ಎಂದವರು ಸಲಹೆ ನೀಡಿದರು.
ಆಟದ ಎಲ್ಲಾ ವಿಭಾಗದಲ್ಲಿಯೂ ಕಠಿಣ ಪರಿಶ್ರಮ ಮುಂದುವರಿಸಿದ್ದಲ್ಲಿ ಅವರು ಭವಿಷ್ಯದಲ್ಲಿ ಭಾರತದ ನಾಯಕನಾಗಬಲ್ಲರು. ಅದರಲ್ಲಿ ಯಾವುದೇ ಅನುಮಾನ ಬೇಡ. ಒಬ್ಬ ನಾಯಕನಿಗ ಬೇಕಾದ ಎಲ್ಲಾ ಗುಣಗಳು ಆತನಲ್ಲಿದೆ ಎಂದವರು ಯುವ ಆಟಗಾರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.
ಅದೇ ಹೊತ್ತಿಗೆ ಟೆಸ್ಟ್ ಕ್ರಿಕೆಟ್‌ನಲ್ಲೂ ಕೊಹ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾದ ಅಗತ್ಯವಿದೆ ಎಂದವರು ಸೇರಿಸಿದರು. ನಾನು ಯಾವತ್ತೂ ಹೇಳುತ್ತಿರುವಂತೆಯೇ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನನ್ನು ಸಾಬೀತು ಪಡಿಸಿದ ಬ್ಯಾಟ್ಸ್‌ಮನ್ ಮಾತ್ರ ಪರಿಪೂರ್ಣನಾಗುತ್ತಾನೆ ಎಂದವರು ಹೇಳಿದರು.
ವಿರಾಟ್ ಪ್ರತಿಭಾವಂತ ಆಟಗಾರ. ಅವರೀಗ ಅಪಾರ ಆತ್ಮವಿಶ್ವಾಸದ ಆಟಗಾರ. ಆದರೆ ಅವರಿಂದ ಇನ್ನೂ ಹೆಚ್ಚಿನ ನಿರೀಕ್ಷೆ ಮಾಡಲಾಗುತ್ತದೆ ಎಂದವರು ಹೇಳಿದರು.
ಇದೇ ಸಂದರ್ಭದಲ್ಲಿ ಯುವ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಗ್ಗೆಯೂ ಅಕ್ರಂ ಹೊಗಳಿಕೆಯ ಮಾತುಗಳನ್ನಾಡಿದರು. ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹೊಸಬರು. ಈ ಕಿರು ಅವಧಿಯಲ್ಲಿ ಗಮನಾರ್ಹ ಪ್ರದರ್ಶನ ನೀಡಲು ಯಶಸ್ವಿಯಾಗಿದ್ದು, ಒತ್ತಡ ಪರಿಸ್ಥಿತಿಯಲ್ಲಿಯೂ ಶಾಂತಚಿತ್ತರಾಗಿ ಬೌಲಿಂಗ್ ಸಂಘಟಿಸುತ್ತಾರೆ. ಬೌಲರ್‌ಗೆ ಬೇಕಾದ ವೈವಿಧ್ಯತೆ ಅವರಲ್ಲಿದೆ. ಮುಂಬರುವ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆಯಿದೆ ಎಂದವರು ಹೇಳಿದರು.