ಕಳಪೆ ಬೌಲಿಂಗ್ ಪ್ರದರ್ಶನದ ಹಿನ್ನೆಲೆಯಲ್ಲಿ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಿಂದ ಆತಿಥೇಯ ಆಸ್ಟ್ರೇಲಿಯಾ ತಂಡದಿಂದ ಎಡಗೈ ವೇಗದ ಮಿಚ್ಚೆಲ್ ಜಾನ್ಸನ್ ಅವರನ್ನು ಕೈಬಿಡಲಾಗಿದೆ.
ಈ ವಿಚಾರವನ್ನು ನಾಯಕ ರಿಕಿ ಪಾಂಟಿಂಗ್ ಗುರುವಾರ ಖಚಿತಪಡಿಸಿದ್ದಾರೆ. 2009ರಲ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದ ಜಾನ್ಸನ್ ಇಂಗ್ಲೆಂಡ್ ವಿರುದ್ಧ ಬ್ರಿಸ್ಬೇರ್ನ್ ಟೆಸ್ಟ್ ಪಂದ್ಯದಲ್ಲಿ 170 ರನ್ ತೆತ್ತಿದ್ದರಲ್ಲದೆ ವಿಕೆಟ್ ಕೀಳುವಲ್ಲಿ ವಿಫಲರಾಗಿದ್ದರು.
ಇದೀಗ ಜಾನ್ಸನ್ ಸ್ಥಾನದಲ್ಲಿ ಕಸಿದುಕೊಳ್ಳಲು ಮತ್ತೊಬ್ಬ ಎಡಗೈ ವೇಗಿ ಡೌಗ್ ಬೊಲ್ಲಿಂಗರ್ ಮತ್ತು ರೈನ್ ಹ್ಯಾರಿಸ್ ಮಧ್ಯೆ ಸ್ಪರ್ಧಾತ್ಮಕ ಪೈಪೋಟಿ ನಡೆಯುತ್ತಿದೆ. ತಂಡದ ಅಂತಿಮ ಬಳಗವನ್ನು ಪಂದ್ಯ ಆರಂಭದ ಸಂದರ್ಭದಲ್ಲಷ್ಟೇ ಆರಿಸಲಾಗುತ್ತದೆ ಎಂದು ತಂಡದ ಮೂಲಗಳು ತಿಳಿಸಿವೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೊದಲ ಟೆಸ್ಟ್ ಹೈ ಸ್ಕೋರಿಂಗ್ ಡ್ರಾದಲ್ಲಿ ಅಂತ್ಯಗೊಂಡಿತ್ತು. ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಆಸೀಸ್ ವೇಗಿ ಪೀಟರ್ ಸಿದ್ಲೇ ಗಮನ ಸೆಳೆದಿದ್ದರು. ಅದೇ ರೀತಿ ಇಂಗ್ಲೆಂಡ್ ಆರಂಭಿಕ ಆಲಿಸ್ಟಾರ್ ಕುಕ್ ದ್ವಿಶತಕ ಬಾರಿಸಿದ್ದರು.