ಮಿಂಚಿದ ಅರವಿಂದ್, ಬಿನ್ನಿ; ಕರ್ನಾಟಕಕ್ಕೆ ಮಹತ್ವದ ಮುನ್ನಡೆ

ಗುರುವಾರ, 2 ಡಿಸೆಂಬರ್ 2010 (18:00 IST)
ಚುರುಕಿನ ದಾಳಿ ಸಂಘಟಿಸಿದ ವೇಗಿ ಎಸ್. ಅರವಿಂದ್ (50ಕ್ಕೆ 4) ಮತ್ತು ಸ್ಟುವರ್ಟ್ ಬಿನ್ನಿ (22ಕ್ಕೆ 3) ನೆರವಿನಿಂದ ಕರ್ನಾಟಕ ತಂಡ ಇಲ್ಲಿ ಹಿಮಾಚಲ ಪ್ರದೇಶ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಸೂಪರ್ ಲೀಗ್ ಹಂತದ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 55 ರನ್ನುಗಳ ಮಹತ್ವದ ಮುನ್ನಡೆ ದಾಖಲಿಸಿದೆ.

ಆದರೆ ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಕಂಡಿರುವ ಕರ್ನಾಟಕ ಎರಡನೇ ದಿನದಂತ್ಯಕ್ಕೆ 31 ಓವರುಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 73 ರನ್ ಗಳಿಸಿದ್ದು, ಹಿನ್ನೆಡೆ ಅನುಭವಿಸಿದೆ. ಆ ಮೂಲಕ ಒಟ್ಟು ಮುನ್ನಡೆಯನ್ನು 128ಕ್ಕೆ ಏರಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕೆ.ಎಲ್ ರಾಹುಲ್ (12), ಕೆ. ಬಿ ಪವನ್ (1), ರಾಬಿನ್ ಉತ್ತಪ್ಪ (11) ಮತ್ತು ನಾಯಕ ಗಣೇಶ್ ಸತೀಶ್ (0) ಮತ್ತೊಮ್ಮೆ ಎಡವಿದರು. ಮೊದಲ ನಾಲ್ಕು ವಿಕೆಟುಗಳನ್ನು 33 ರನ್ ಅಂತರದಲ್ಲೇ ಕಳೆದುಕೊಂಡ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ನೆರವಿಗೆ ಬಂದಿರುವ ಭರವಸೆಯ ಮನೀಷ್ ಪಾಂಡೆ (26*) ಮತ್ತು ಅಮಿತ್ ವರ್ಮಾ (20*) ಉತ್ತಮವಾಗಿ ಮೂಡಿ ಬರುತ್ತಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿಯೂ ಕರ್ನಾಟಕಕ್ಕೆ ಕಂಟಕವಾಗಿರುವ ಮೊಹಿಂದರರಾಜ್ ಶರ್ಮಾ ಇದೀಗಲೇ ಎರಡು ವಿಕೆಟ್ ಕಿತ್ತಿದ್ದಾರೆ.

ಇದಕ್ಕೂ ಮೊದಲು ಅರವಿಂದ್ ಮತ್ತು ಬಿನ್ನಿ ಮಾರಕ ದಾಳಿಗೆ ತತ್ತರಿಸಿದ ಹಿಮಾಚಲ ಪ್ರದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 199 ರನ್ನುಗಳಿಗೆ ಸರ್ವಪತನಗೊಂಡಿತ್ತು. ಬ್ಯಾಟಿಂಗ್‌ನಲ್ಲಿಯೂ ಆಕರ್ಷಕ ಶತಕ ದಾಖಲಿಸುವ ಮೂಲಕ ತಂಡಕ್ಕೆ ನೆರವಾಗಿದ್ದ ಬಿನ್ನಿ ಮೂರು ವಿಕೆಟ್ ಕಿತ್ತುವ ಮೂಲಕ ಆಲ್‌ರೌಂಡರ್ ಪ್ರದರ್ಶನ ನೀಡಿದರು. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಿ.ಎಮ್. ಗೌತಮ್ ಗಾಯಳುವಾದ ಹಿನ್ನೆಲೆಯಲ್ಲಿ ಬಿನ್ನಿ ಆಡಲು ಅವಕಾಶ ಪಡೆದಿದ್ದರು. ಹಾಗೆಯೇ ಸ್ಪಿನ್ ಮೋಡಿ ಮಾಡಿದ ಸುನಿಲ್ ಜೋಶಿ ಕೂಡಾ ಎರಡು ವಿಕೆಟ್ ಕಿತ್ತರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ ನಮ್ಮನ್ನು ಫಾಲೋ ಮಾಡಿ

ಸಂಕ್ಷಿಪ್ತ ಸ್ಕೋರ್ ಬೋರ್ಡ್:

2ನೇ ದಿನದಂತ್ಯಕ್ಕೆ...
ಕರ್ನಾಟಕ 254 ಮತ್ತು 73/4
ಹಿಮಾಚಲ ಪ್ರದೇಶ 199

ವೆಬ್ದುನಿಯಾವನ್ನು ಓದಿ