ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಸಾಗುತ್ತಿರುವ ಏಕದಿನ ಸರಣಿಯ ಅಂತಿಮದ ಮೂರು ಪಂದ್ಯಗಳಿಗಾಗಿನ ಟೀಮ್ ಇಂಡಿಯಾವನ್ನು ಘೋಷಿಸಲಾಗಿದ್ದು, ಕೊನೆಯ ಎರಡು ಪಂದ್ಯಗಳಿಂದ ಕರ್ನಾಟಕ ವೇಗಿ ವಿನಯ್ ಕುಮಾರ್ ಅವರನ್ನು ಕೈಬಿಡಲಾಗಿದೆ.
ಗಾಯದಿಂದ ಚೇತರಿಸಿಕೊಂಡಿರುವ ಎಡಗೈ ವೇಗಿ ಜಹೀರ್ ಖಾನ್ ಪುನರಾಗಮನ ಮಾಡಿಕೊಂಡಿದ್ದಾರೆ. ಅದೇ ಹೊತ್ತಿಗೆ ಮುಂಬರುವ ದಕ್ಷಿಣ ಆಫ್ರಿಕಾ ಸರಣಿ ಹಿನ್ನೆಲೆಯಲ್ಲಿ ಆಲ್‌ರೌಂಡರ್ ಸುರೇಶ್ ರೈನಾ ಮತ್ತು ಇನ್ ಫಾರ್ಮ್ ವೇಗಿ ಎಸ್. ಶ್ರೀಶಾಂತ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಖಾಯಂ ನಾಯಕ ಮಹೇಂದ್ರ ಸಿಂಗ್ ಧೋನಿ ಅನುಪಸ್ಥಿತಿಯಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಆರಂಭಿಕ ಗೌತಮ್ ಗಂಭೀರ್ ಅವರೇ ಮುಂದಿನ ಮೂರು ಪಂದ್ಯಗಳಲ್ಲಿಯೂ ನಾಯಕತ್ವ ಜವಾಬ್ದಾರಿ ವಹಿಸಲಿದ್ದಾರೆ. ಗಾಯದ ಕಳವಳ ಹಿನ್ನೆಲೆಯಲ್ಲಿ ಧೋನಿ ಸಹಿತ ತಂಡದ ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ಹರಭಜನ್ ಸಿಂಗ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ಪ್ರಮುಖ ಆಟಗಾರರೊಂದಿಗೆ ರೈನಾ ಮತ್ತು ಶ್ರೀಶಾಂತ್ ಬೇಗನೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ.
ಆದರೆ ಅಂತಿಮದ ಎರಡು ಏಕದಿನಗಳಿಂದ ವೇಗಿ ವಿನಯ್ ಕುಮಾರ್ ಅವರನ್ನು ಕಡೆಗಣಿಸಿರುವುದು ಕರ್ನಾಟಕ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದೆ. ಇವರ ಸ್ಥಾನವನ್ನು ಮುಂಬೈನ ರೋಹಿತ್ ಶರ್ಮಾ ಪಡೆದಿದ್ದಾರೆ. ಅದೇ ರೀತಿ ಕೊನೆಯ ಎರಡು ಪಂದ್ಯಗಳಲ್ಲಿ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಗುಜರಾತ್‌ನ ಪಾರ್ಥಿವ್ ಪಟೇಲ್ ವಹಿಸಲಿದ್ದಾರೆ. ಇದರಿಂದಾಗಿ ಬಂಗಾಳ ವಿಕೆಟ್ ಕೀಪರ್ ವೃದ್ದೀಮಾನ್ ಸಹಾ ಅವಕಾಶ ವಂಚಿತರಾಗಿದ್ದಾರೆ.
ಪ್ರವೀಣ್ ಕುಮಾರ್ ಜ್ವರದಿಂದ ಬಳಲಿದ ಸಂದರ್ಭದಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದ ಎಡಗೈ ವೇಗಿ ಆಶಿಶ್ ನೆಹ್ರಾ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಮುಂದಿನ ಮೂರು ಪಂದ್ಯಗಳಿಗೆ ಘೋಷಿಸಲಾಗಿರುವ ಎರಡು ಬೇರೆ ಬೇರೆ ತಂಡಗಳಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ.
ಸರಣಿಯ ಮೂರನೇ ಪಂದ್ಯವು ವಡೋದರಾದಲ್ಲಿ ನಡೆಯಲಿದ್ದರೆ ಕೊನೆಯ ಎರಡು ಪಂದ್ಯಗಳು ಕ್ರಮವಾಗಿ ಬೆಂಗಳೂರು ಮತ್ತು ಚೆನ್ನೈನಲ್ಲಿ ಅಹರ್ನಿಶಿಯಾಗಿ ಸಾಗಲಿದೆ. ಈ ಎಲ್ಲ ಪಂದ್ಯಗಳು ಕ್ರಮವಾಗಿ ಡಿಸೆಂಬರ್ 4, 7 ಮತ್ತು 10ರಂದು ನಡೆಯಲಿದೆ. ಇದೀಗಲೇ ಆಡಿರುವ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿರುವ ಗೌತಿ ಪಡೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.