ಗಂಭೀರ್ ಬ್ಯಾಕ್ ಟು ಬ್ಯಾಕ್ ಸೆಂಚುರಿ; ಭಾರತಕ್ಕೆ ಸರಣಿ ಜಯ

ಶನಿವಾರ, 4 ಡಿಸೆಂಬರ್ 2010 (16:35 IST)
PTI
ನಾಯಕ ಗೌತಮ್ ಗಂಭೀರ್ (126*) ಬಾರಿಸಿರುವ ಸತತ ಎರಡನೇ ಶತಕ ಮತ್ತು ವಿರಾಟ್ ಕೊಹ್ಲಿ (63*) ಬಾರಿಸಿರುವ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ತಂಡವು ಇಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ತೃತೀಯ ಏಕದಿನ ಪಂದ್ಯವನ್ನು ಒಂಬತ್ತು ವಿಕೆಟುಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದ್ದು, ಐದು ಪಂದ್ಯಗಳ ಏಕದಿನ ಸರಣಿಯನ್ನು ಇನ್ನೂ ಎರಡು ಪಂದ್ಯ ಬಾಕಿ ಉಳಿದಿರುವಂತೆಯೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ತಂಡದ ಅಗ್ರ ಆಟಗಾರರಿಗೆ ವಿಶ್ರಾಂತಿ ನೀಡಿರುವ ಹೊರತಾಗಿಯೂ ಗೌತಿ ನೇತೃತ್ವದ ಯುವ ಪಡೆ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಅಮೋಘ ಫಾರ್ಮ್‌ನಲ್ಲಿರುವ ನಾಯಕ ಗಂಭೀರ್ ಅವರೇ ತಂಡವನ್ನು ಸರಣಿ ಗೆಲುವಿನತ್ತ ಮುನ್ನಡೆಸಿದರು.

ಗೆಲುವಿಗಾಗಿ 225 ರನ್ನುಗಳ ಸವಾಲಿನ ಮೊತ್ತ ಬೆನ್ನತ್ತಿದ ಭಾರತ ಇನ್ನೂ 63 ಎಸೆತಗಳನ್ನು ಬಾಕಿ ಉಳಿದಿರುವಂತೆಯೇ ಕೇವಲ ಒಂದು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.

ಏಕದಿನ ಕ್ಯಾರಿಯರ್‌ನ ಒಂಬತ್ತನೇ ಹಾಗೂ ನಾಯಕನಾಗಿ ಸತತ ಎರಡನೇ ಶತಕ ಬಾರಿಸಿದ ಗಂಭೀರ್ ಮತ್ತೊಮ್ಮೆ ದರ್ಬಾರ್ ನಡೆಸಿದರು. ಕಳೆದ ಜೈಪುರ ಪಂದ್ಯದಲ್ಲಿಯೂ ಅಜೇಯ 138 ರನ್ ಗಳಿಸಿದ್ದ ಗಂಭೀರ್ ನಾಯಕನಾಟ ಆಡಿದ್ದರು. ಈ ಪಂದ್ಯದಲ್ಲಿಯೂ ಕೇವಲ 117 ಎಸೆತಗಳನ್ನು ಎದುರಿಸಿದ ಗೌತಿ 16 ಬೌಂಡರಿಗಳ ನೆರವಿನಿಂದ 126 ರನ್ ಗಳಿಸಿ ಔಟಾಗದೆ ಉಳಿದರು. .

PTI
ಇನ್ ಫಾರ್ಮ್ ಆಟಗಾರ ವಿರಾಟ್ ಕೊಹ್ಲಿ ಕೂಡಾ ಅಜೇಯ ಅರ್ಧಶತಕ ದಾಖಲಿಸಿದರು. 70 ಎಸೆತಗಳನ್ನು ಎದರುಸಿದ ಕೊಹ್ಲಿ ಆರು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರುಗಳ ನೆರವಿನಿಂದ 63 ರನ್ ಗಳಿಸಿದ್ದರಲ್ಲದೆ ದ್ವಿತೀಯ ವಿಕೆಟ್‌ಗೆ ನಾಯಕ ಗಂಭೀರ್ ಜತೆ 114 ರನ್ನುಗಳ ಜತೆಯಾಟದಲ್ಲಿ ಭಾಗಿಯಾದರು. ಇದು ಏಕದಿನದಲ್ಲಿ ಕೊಹ್ಲಿ ಬಾರಿಸುತ್ತಿರುವ ಸತತ ನಾಲ್ಕನೇ ಅರ್ಧಶತಕವಾಗಿದೆ.

ಇದಕ್ಕೂ ಮೊದಲು ಮುರಳಿ ವಿಜಯ್ ಜತೆ ಸೇರಿಕೊಂಡಿದ್ದ ಗಂಭೀರ್ ಮೊದಲ ವಿಕೆಟ್‌ಗೆ ಕೇವಲ 18.4 ಓವರುಗಳಲ್ಲಿ 115 ರನ್ನುಗಳ ಜತೆಯಾಟ ನೀಡಿದ್ದರು. 30 ರನ್ ಗಳಿಸಿದ ವಿಜಯ್ ರನೌಟ್‌ಗೆ ಬಲಿಯಾದರು.

ಈ ಗೆಲುವಿನೊಂದಿಗೆ ಭಾರತ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಏಕದಿನ ತಂಡ ರ‌್ಯಾಂಕಿಂಗ್ ಪಟ್ಟಿನಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ.

ಫ್ರಾಂಕ್ಲಿನ್ ಸಮಯೋಚಿತ ಅರ್ಧಶತಕ...
ಈ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್, ಆಲ್‍‌ರೌಂಡರ್ ಜೇಮ್ಸ್ ಫ್ರಾಂಕ್ಲಿನ್ (72*) ಅವರ ಸಮಯೋಚಿತ ಅರ್ಧಶತಕದ ನೆರವಿನಿಂದ ನಿಗದಿತ 50 ಓವರುಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 224 ರನ್ನುಗಳ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು.

106ಕ್ಕೆ ಪ್ರಮುಖ ಏಳು ವಿಕೆಟುಗಳನ್ನು ಕಳೆದುಕೊಂಡಿದ್ದ ನ್ಯೂಜಿಲೆಂಡ್ ಒಂದು ಹಂತದಲ್ಲಿ 200ರ ಗಡಿ ದಾಟುವುದು ಕಷ್ಟವೆನಿಸಿತ್ತು. ಆದರೆ ಎಂಟನೇ ವಿಕೆಟ್‌ಗೆ ಮಹತ್ವದ 94 ರನ್ನುಗಳ ಜತೆಯಾಟ ನೀಡಿದ ಫ್ರಾಂಕ್ಲಿನ್ ಮತ್ತು ನಥನ್ ಮೆಕಲಮ್ (43) ಜೋಡಿ ತಂಡವು ಗೌರವಯುತ ಮೊತ್ತ ಪೇರಿಸುವಲ್ಲಿ ನೆರವಾದರು.

ಗಾಯಳು ಜೆಸ್ಸಿ ರೈಡರ್ ತವರಿಗೆ ಮರಳಿದ ಹಿನ್ನೆಲೆಯಲ್ಲಿ ತಂಡದಲ್ಲಿ ಕಾಣಿಸಿಕೊಂಡಿದ್ದ ಫ್ರಾಂಕ್ಲಿನ್‌ ಕಳೆದೆರಡು ಪಂದ್ಯಗಳಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. ಆದರೆ ಮೂರನೇ ಏಕದಿನದಲ್ಲಿ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡಿರುವ ಫ್ರಾಂಕ್ಲಿನ್ ಸಮಯೋಚಿತ ಬ್ಯಾಟಿಂಗ್ ಮಾಡುವ ಮೂಲಕ ತಂಡ ಸವಾಲಿನ ಮೊತ್ತ ಪೇರಿಸುವಲ್ಲಿ ನೆರವಾದರು. 108 ಎಸೆತಗಳನ್ನು ಎದುರಿಸಿದ ಫ್ಲಾಂಕ್ಲಿನ್ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 76 ರನ್ ಗಳಿಸಿ ಔಟಾಗದೆ ಉಳಿದರು. ಅದೇ ರೀತಿ ಫ್ರಾಂಕ್ಲಿನ್‌ಗೆ ಉತ್ತಮ ಸಾಥ್ ನೀಡಿದ ನಥನ್ ಮೆಕಲಮ್ 43 ರನ್ ಗಳಿಸಿದರು.

ಇದಕ್ಕೂ ಮೊದಲು ಭಾರತೀಯ ಬೌಲರುಗಳ ನಿಖರ ದಾಖಿಗೆ ಕುಸಿದಿದ್ದ ಕಿವೀಸ್ ತನ್ನ ಮೊದಲ ಏಳು ವಿಕೆಟುಗಳನ್ನು 106 ರನ್ ಅಂತರದಲ್ಲಿ ಕಳೆದುಕೊಂಡಿತ್ತು. ಗಾಯದಿಂದಾಗಿ ಕಳೆದೆರಡು ಪಂದ್ಯಗಳಿಂದ ಹೊರಗುಳಿದಿದ್ದ ಬ್ರೆಂಡನ್ ಮೆಕಲಮ್ ಶೂನ್ಯ ಸಂಪಾದಿಸುವ ಮೂಲಕ ನಿರಾಸೆ ಮೂಡಿಸಿದರು. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ್ದ ಮಾರ್ಟಿನ್ ಗುಪ್ಟಿಲ್ (12) ರನೌಟ್‌ಗೆ ಬಲಿಯಾದರು.

ನಂತರ ಬಂದ ಕೇನೆ ವಿಲಿಯಮ್ಸನ್ (21), ರಾಸ್ ಟೇಲರ್ (4), ಸ್ಕಾಟ್ ಸ್ಟೈರಿಸ್ (22), ಡ್ಯಾನಿಯಲ್ ವಿಟ್ಟೋರಿ (3) ಮತ್ತು ಗೇರತ್ ಹಾಪ್ಕಿನ್ಸ್ (6) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು.

ತಮ್ಮ ಪುನರಾಗಮನವನ್ನು ಯಶಸ್ವಿಯಾಗಿಯೇ ಆರಂಭಿಸಿರುವ ಜಹೀರ್ ಖಾನ್, ಆರ್. ಅಶ್ವಿನ್ ಮತ್ತು ಸ್ಥಳೀಯ ಹೀರೊ ಯೂಸುಫ್ ಪಠಾಣ್ ತಲಾ ಎರಡು ಮತ್ತು ಮುನಾಫ್ ಪಟೇಲ್ ಒಂದು ವಿಕೆಟ್ ಕಿತ್ತು ಮಿಂಚಿದರು.

ಆಡುವ ಬಳಗ ಇಂತಿದೆ

ಭಾರತ: ಗೌತಮ್ ಗಂಭೀರ್ (ನಾಯಕ), ಮುರಳಿ ವಿಜಯ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ರವೀಂದ್ರ ಜಡೇಜಾ, ವೃದ್ದೀಮಾನ್ ಸಹಾ (ವಿಕೆಟ್ ಕೀಪರ್), ಜಹೀರ್ ಖಾನ್, ಆಶಿಶ್ ನೆಹ್ರಾ ಮತ್ತು ಮುನಾಫ್ ಪಟೇಲ್

ನ್ಯೂಜಿಲೆಂಡ್: ಬ್ರೆಂಡನ್ ಮೆಕಲಮ್, ಮಾರ್ಟಿನ್ ಗುಪ್ಟಿಲ್, ರಾಸ್ ಟೇಲರ್, ಸ್ಕಾಟ್ ಸ್ಟೈರಿಸ್, ಕೇನೆ ವಿಲಿಯಮ್ಸನ್, ಡ್ಯಾನಿಯಲ್ ವಿಟ್ಟೋರಿ (ನಾಯಕ), ಜೇಮ್ಸ್ ಫ್ರಾಂಕ್ಲಿನ್, ಗೇರತ್ ಹಾಪ್ಕಿನ್ಸ್ (ವಿಕೆಟ್ ಕೀಪರ್), ನಥನ್ ಮೆಕಲಮ್, ಕೈಲ್ ಮಿಲ್ಸ್ ಮತ್ತು ಆಂಡಿ ಮೆಕ್‌ಕೇ

ವೆಬ್ದುನಿಯಾವನ್ನು ಓದಿ