ಟೆಸ್ಟ್ ಕ್ರಿಕೆಟ್‌ಗೂ ವಿಶ್ವಕಪ್; 2013ರಲ್ಲಿ ಚಾಲನೆ ಸಾಧ್ಯತೆ

ಭಾನುವಾರ, 5 ಡಿಸೆಂಬರ್ 2010 (16:06 IST)
ಏಕದಿನ ಕ್ರಿಕೆಟ್‌ಗೆ ವಿಶ್ವಕಪ್ ಹುಟ್ಟಿಕೊಂಡು ಹಲವು ದಶಕಗಳೇ ಕಳೆದಿವೆ. ಮೊನ್ನೆ ಮೊನ್ನೆ ಜನ್ಮ ತಾಳಿದ ಟ್ವೆಂಟಿ-20ಗೂ ವಿಶ್ವಕಪ್ ಇದೆ. ಹೀಗಿರುವಾಗ ಗೌರವಾನ್ವಿತರ ಆಟ ಎಂದೇ ಪರಿಗಣಿಸಲ್ಪಡುವ ಟೆಸ್ಟ್ ಕ್ರಿಕೆಟ್‌ಗೆ ವಿಶ್ವಕಪ್ ಇಲ್ಲದಿದ್ದರೆ ಹೇಗೆ? ಇಂತಹ ಯೋಚನೆ ಐಸಿಸಿಗೂ ಬಂದಿದ್ದು, 2013ರಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಆಯೋಜಿಸುವ ಲೆಕ್ಕಾಚಾರ ಹಾಕಲಾಗುತ್ತಿದೆ.

ಪ್ರಸಕ್ತ ಟೆಸ್ಟ್ ಕ್ರಿಕೆಟಿನಲ್ಲಿ ರ‌್ಯಾಂಕಿಂಗ್ ವ್ಯವಸ್ಥೆಯಿದ್ದರೂ, ಅಗ್ರ ಟೆಸ್ಟ್ ರಾಷ್ಟ್ರ ಯಾವುದು ಎಂಬುದನ್ನು ಘೋಷಿಸಲು ಯಾವುದೇ ಟೂರ್ನಮೆಂಟ್ ಇಲ್ಲ. ಹಾಗಾಗಿ ಇದೇ ರ‌್ಯಾಂಕಿಂಗನ್ನು ಬಳಸಿಕೊಂಡು ನಾಲ್ಕು ಪ್ಲೇ‌ಆಫ್ ಸ್ಥಾನಗಳನ್ನು ನಿರ್ಧರಿಸಿ 2013ರಲ್ಲಿ ಮೊದಲ ಟೆಸ್ಟ್ ವಿಶ್ವಕಪ್ ನಡೆಸುವ ಯೋಚನೆ ಐಸಿಸಿಯದ್ದು.

ಕ್ರಿಕೆಟ್ ಚುಟುಕು ಪ್ರಕಾರ ಟ್ವೆಂಟಿ-20 ಬಂದ ಮೇಲೆ ಟೆಸ್ಟ್ ಕ್ರಿಕೆಟ್ ಅವನತಿಯತ್ತ ಸಾಗುತ್ತಿರುವುದನ್ನು ಬಚಾವ್ ಮಾಡಲು ಇಂತಹ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ನಾಲ್ಕು ವರ್ಷಗಳಿಗೊಮ್ಮೆ ಈ ವಿಶ್ವಕಪ್ ನಡೆಯಲಿದೆ. ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ ಪ್ರವೇಶಿಸಿದ ನಂತರ, ಚಾಂಪಿಯನ್ ರಾಷ್ಟ್ರ ಯಾವುದು ಎಂಬುದು ನಿರ್ಧಾರವಾಗುತ್ತದೆ. ಅದಕ್ಕೂ ಮೊದಲು ಪ್ಲೇಆಫ್‌ ಪಂದ್ಯಗಳು ನಡೆಯುತ್ತವೆ.

ಇಂತಹ ವಿನೂತನ ಚಿಂತನೆಯನ್ನು ಬಹಿರಂಗಪಡಿಸಿರುವುದು ಐಸಿಸಿ ಸಿಇಒ ಹರೂನ್ ಲಾರ್ಗಟ್. ನನ್ನ ಪ್ರಕಾರ ಇದು 2013ರಲ್ಲಿ ನಡೆಯುವ ಸಾಧ್ಯತೆಗಳಿವೆ. ಪ್ರಸಕ್ತ ಹೊಂದಿರುವ ಟೆಸ್ಟ್ ರ‌್ಯಾಂಕಿಂಗ್ ಆಧರಿಸಿ ತಂಡಗಳನ್ನು ನಿರ್ಧರಿಸಲಾಗುತ್ತದೆ ಎಂದು ಅವರು ಹೇಳಿರುವುದಾಗಿ ಆಸ್ಟ್ರೇಲಿಯಾ ರೇಡಿಯೋ ವರದಿ ಮಾಡಿದೆ.

ಅದೇ ಹೊತ್ತಿಗೆ 2015ರ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ಗಳಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್‌ನಲ್ಲಿನ ತಂಡಗಳನ್ನು ಕಡಿತಗೊಳಿಸಲು ಐಸಿಸಿ ನಿರ್ಧರಿಸಿರುವುದನ್ನು ಲಾರ್ಗಟ್ ಖಚಿತಪಡಿಸಿದ್ದಾರೆ.

2015ರ ವಿಶ್ವಕಪ್‌ನಲ್ಲಿ 14 ತಂಡಗಳ ಬದಲು 10 ತಂಡಗಳು ಮಾತ್ರ ಇರುತ್ತವೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಟ್ವೆಂಟಿ-20 ವಿಶ್ವಕಪ್ ತಂಡಗಳನ್ನು 12ರಿಂದ 16ಕ್ಕೆ ಏರಿಸಲಾಗುತ್ತದೆ. ಇದು ಮುಂದಿನ (2012) ಚುಟುಕು ಕ್ರಿಕೆಟ್ ವಿಶ್ವಕಪ್ ನಡೆಯುವ ಶ್ರೀಲಂಕಾದಲ್ಲಿ ಜಾರಿಗೆ ಬರಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ