2012ರಲ್ಲಿ ನಡೆಯಲಿರುವ ಏಷ್ಯಾ ಕಪ್ ಆತಿಥ್ಯವನ್ನು ಬಾಂಗ್ಲಾದೇಶಕ್ಕೆ ನೀಡಲಾಗಿದೆ. ಢಾಕಾದಲ್ಲಿ ನಡೆದ ಏಷ್ಯಾ ಕ್ರಿಕೆಟ್ ಕೌನಿಲ್ಸ್ (ಎಸಿಸಿ) ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
2012 ಮಾರ್ಚ್ 1ರಿಂದ 12ರ ವರೆಗೆ ಮೀರ್‌ಪುರ್‌ದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟೂರ್ನಮೆಂಟ್ ನಡೆಯಲಿದೆ. ಈ ಹಿಂದೆ 2000ನೇ ಇಸವಿಯಲ್ಲಿಯೂ ಬಾಂಗ್ಲಾದೇಶ ಆತಿಥ್ಯ ವಹಿಸಿತ್ತು.
ಏಷ್ಯಾದಲ್ಲಿ ಟೆಸ್ಟ್‌ಗೆ ಮಾನ್ಯತೆ ಪಡೆದ ಅಗ್ರ ನಾಲ್ಕು ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದೆ. ಭವಿಷ್ಯದಲ್ಲಿ ತಂಡಗಳ ಏರಿಕೆ ಮಾಡುವ ಉದ್ದೇಶವಿದ್ದು, ಈ ನಿಟ್ಟಿನಲ್ಲಿ ಅಫಘಾನಿಸ್ತಾನ ಪ್ರಮುಖ ತಂಡವಾಗಿದೆ ಎಂದು ಎಸಿಸಿ ಮಾಧ್ಯಮ ಮ್ಯಾನೇಜರ್ ಶಹರಾಯರ್ ಖಾನ್ ತಿಳಿಸಿದ್ದಾರೆ.
ಆತಿಥ್ಯ ಹಕ್ಕಿಗೆ ಸಂಬಂಧಿಸಿದಂತೆ ಚೀನಾದಿಂದ ಪ್ರಬಲ ಪೈಪೋಟಿ ಎದುರಾಗಿತ್ತು. ಆದರೆ ಚೀನಾದಲ್ಲಿ ಸೂಕ್ತ ವ್ಯವಸ್ಥೆಯ ಕೊರತೆಯ ಹಿನ್ನೆಲೆಯಲ್ಲಿ ಹಕ್ಕು ಬಾಂಗ್ಲಾಕ್ಕೆ ಲಭಿಸಿದೆ. ಏಷ್ಯಾ ಗೇಮ್ಸ್‌ನಲ್ಲಿ ಟ್ವೆಂಟಿ-20 ಪ್ರಕಾರದ ಕ್ರಿಕೆಟನ್ನು ಯಶಸ್ವಿಯಾಗಿ ಆಯೋಜಿಸಿದ್ದ ಚೀನಾ, ಏಷ್ಯಾ ಕಪ್ ಆತಿಥ್ಯಕ್ಕೂ ಅತೀವ ಉತ್ಸುಕತೆ ವ್ಯಕ್ತಪಡಿಸಿತ್ತು.
ಬಾಂಗ್ಲಾದೇಶದಲ್ಲಿ ನಡೆಯಲಿರುವ ಏಷ್ಯಾಕಪ್ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸಲಿದ್ದೇವೆ ಎಂದು ಎಸಿಸಿಯ ಸಿಇಒ ಸಯ್ಯದ್ ಅಶ್ರಫುಲ್ ಹಕ್ ತಿಳಿಸಿದರು.
ಈ ಬಾರಿ ನಡೆದಿದ್ದ ಏಷ್ಯಾಕಪ್‌ನಲ್ಲಿ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿದ್ದ ಭಾರತ ತಂಡವು 15 ವರ್ಷಗಳ ಬಳಿಕ ಏಷ್ಯಾಕಪ್ ಜಯಿಸಿದ ಸಾಧನೆ ಮಾಡಿತ್ತು.