ಗಾಯಾಳು ಜಹೀರ್ ಔಟ್; ಜೈದೇವ್‌ಗೆ ಚೊಚ್ಚಲ ಪಂದ್ಯ

ಗುರುವಾರ, 16 ಡಿಸೆಂಬರ್ 2010 (19:02 IST)
ಭಾರತ-ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್; ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ....

ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಪಂದ್ಯ ತಡವಾಗಿ ಆರಂಭಗೊಂಡಿದೆ. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ ಸ್ಮಿತ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದಾರೆ.

ಇದರೊಂದಿಗೆ ಮತ್ತೊಮ್ಮೆ ಟಾಸ್ ಅದೃಷ್ಟವನ್ನು ಕಳೆದುಕೊಂಡಿರುವ ಮಹೇಂದ್ರ ಸಿಂಗ್ ಧೋನಿ ಬಳಗ ಬ್ಯಾಟಿಂಗ್‌ಗಿಳಿಸಲ್ಪಟ್ಟಿದೆ. ನಿರೀಕ್ಷೆಯೆಂಬಂತೆ ಗಾಯದ ಸಮಸ್ಯೆಗೆ ತುತ್ತಾಗಿರುವ ಅನುಭವಿ ವೇಗಿ ಜಹೀರ್ ಖಾನ್ ಈ ಪಂದ್ಯಕ್ಕೆ ಅಲಭ್ಯರಾಗಿದ್ದು, ಸೌರಾಷ್ಟ್ರದ ಎಡಗೈ ವೇಗಿ ಜೈದೇವ್ ಉನದ್ಕತ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡುವ ಅವಕಾಶ ಪಡೆದಿದ್ದಾರೆ.

ಯಾವ ಪರಿಸ್ಥಿತಿನಲ್ಲೂ ನಿಖರ ದಾಳಿ ಸಂಘಟಿಸುವ ಕೌಶಲ್ಯ ಹೊಂದಿರುವ ಅನುಭವಿ ಜಹೀರ್ ಅನಪಸ್ಥಿತಿಯಿಂದಾಗಿ ಭಾರತೀಯ ಪಾಳೆಯದಲ್ಲಿ ನಡುಕ ಸೃಷ್ಟಿಯಾಗಿದೆ. ಆದರೆ ಉತ್ತಮ ಲಯದಲ್ಲಿರುವ ಶ್ರೀಶಾಂತ್ ಮತ್ತು ಇಶಾಂತ್ ಈ ಕೊರತೆಯನ್ನು ನೀಗಿಸುವ ವಿಶ್ವಾಸದಲ್ಲಿದ್ದಾರೆ. ಇವರಿಬ್ಬರಿಗೆ ಪದಾರ್ಪಣಾ ಪಂದ್ಯವನ್ನಾಡುತ್ತಿರುವ ಜೈದೇವ್ ಸಾಥ್ ನೀಡಲಿದ್ದಾರೆ.

ಮತ್ತೊಂದೆಡೆ ಪಿಚ್ ತೇವಯುಕ್ತವಾಗಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿರುವ ಆತಿಥೇಯ ದಕ್ಷಿಣ ಆಫ್ರಿಕಾ ಮೊದಲು ಫೀಲ್ಡಿಂಗ್ ನಡೆಸಲು ನಿರ್ಧರಿಸಿದೆ. ಆದರೆ ದಕ್ಷಿಣ ಆಫ್ರಿಕಾದ ಪ್ರಬಲ ವೇಗಿಗಳಿಗೆ ಭಾರತದ ಚಾಂಪಿಯನ್ ಬ್ಯಾಟ್ಸ್‌ಮನ್‌ಗಳು ಯಾವ ರೀತಿ ಸೆಡ್ಡು ನೀಡಲಿದ್ದಾರೆಂಬುದನ್ನು ಕಾದು ನೋಡಬೇಕಾಗಿದೆ.

ವಿಶ್ವದ ಎರಡು ಅಗ್ರ ತಂಡಗಳ ನಡುವಣ ಕಾದಾಟವನ್ನು ಕ್ರಿಕೆಟ್ ಅಭಿಮಾನಿಗಳು ಭಾರಿ ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದರೆ ಕಳೆದ ರಾತ್ರಿ ಸುರಿದ ಜಡಿಮಳೆಯು ಎಡೆಬಿಡದೆ ಮುಂದುವರಿದ್ದರಿಂದ ಟೀ ವಿರಾಮದ ಅವಧಿಯ ವರೆಗೂ ಆಟ ಸ್ಥಗಿತಗೊಂಡಿತ್ತು.

50ನೇ ಟೆಸ್ಟ್ ಶತಕ ಎದುರು ನೋಡುತ್ತಿರುವ ಸಚಿನ್ ತೆಂಡೂಲ್ಕರ್, ತನಗೆ ವೈಯಕ್ತಿಕ ಸಾಧನೆಗಿಂತ ತಂಡದ ಗೆಲುವೇ ಮುಖ್ಯ ಎಂದು ಸಾರಿದ್ದಾರೆ. ಆದರೂ ಲಿಟ್ಲ್ ಮಾಸ್ಟರ್ ಇದೇ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡುವ ವಿಶ್ವಾಸದಲ್ಲಿದ್ದಾರೆ.

ಆಡುವ ಬಳಗ:

ಭಾರತ: ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸುರೇಶ್ ರೈನಾ, ಮಹೇಂದ್ರ ಸಿಂಗ್ ಧೋನಿ (ನಾಯಕ ಹಾಗೂ ವಿಕೆಟ್ ಕೀಪರ್), ಹರಭಜನ್ ಸಿಂಗ್, ಎಸ್. ಶ್ರೀಶಾಂತ್, ಇಶಾಂತ್ ಶರ್ಮಾ ಮತ್ತು ಜೈದೇವ್ ಉನದ್ಕತ್.

ದಕ್ಷಿಣ ಆಫ್ರಿಕಾ: ಗ್ರೇಮ್ ಸ್ಮಿತ್ (ನಾಯಕ), ಆಲ್ವಿರೊ ಪೀಟರ್‌ಸನ್, ಜಾಕ್ವಾಸ್ ಕಾಲಿಸ್, ಹಾಶೀಮ್ ಆಮ್ಲಾ, ಅಬ್ರಹಾಂ ಡಿ ವಿಲಿಯರ್ಸ್, ಆಶ್ವೆಲ್ ಪ್ರಿನ್ಸ್, ಮಾರ್ಕ್ ಬೌಷರ್ (ವಿಕೆಟ್ ಕೀಪರ್), ಲಾನ್ವೆಂಬೊ ತ್ಸೊತ್ಸೊಬೆ, ಪಾಲ್ ಹ್ಯಾರಿಸ್, ಡೇಲ್ ಸ್ಟೈನ್ ಮತ್ತು ಮೊರ್ನೆ ಮೊರ್ಕೆಲ್.

ವೆಬ್ದುನಿಯಾವನ್ನು ಓದಿ