ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲೂ ಪ್ರವಾಸಿ ಇಂಗ್ಲೆಂಡ್ ತಂಡ ತನ್ನ ಅಧಿಪತ್ಯವನ್ನು ಮುಂದುವರಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಿಕಿ ಪಾಂಟಿಂಗ್ ಬಳಗ ಮೊದಲ ದಿನದಲ್ಲೇ 268 ರನ್ನುಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿದೆ.
ಇದರೊಂದಿಗೆ ಆಸೀಸ್ ತಂಡ ಮತ್ತೊಮ್ಮೆ ಹಿನ್ನೆಡೆ ಅನುಭವಿಸುವಂತಾಗಿದೆ. ಮೊದಲ ಐದು ವಿಕೆಟುಗಳನ್ನು 65 ರನ್ ಅಂತರದಲ್ಲಿ ಕಳೆದುಕೊಂಡಿದ್ದ ಆಸೀಸ್ 200ರ ಗಡಿ ದಾಟುವುದು ಕಷ್ಟವೆನಿಸಿತ್ತು. ಆದರೆ ಬಾಲಂಗೋಚಿಗಳ ಸಮಯೋಚಿತ ಆಟದ ನೆರವಿನಿಂದ ಗೌರವಯುತ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು.
ಮೈಕಲ್ ಹಸ್ಸಿ (61), ಬ್ರಾಡ್ ಹಡ್ಡಿನ್ (53) ಮತ್ತು ಮಿಚ್ಚೆಲ್ (62) ಅರ್ಧಶತಕಗಳನ್ನು ಬಾರಿಸಿದರು. ಆದರೆ ಬ್ಯಾಟಿಂಗ್ ಸ್ಟಾರ್‌ಗಳಾದ ಶೇನ್ ವಾಟ್ಸನ್ (13), ಪಿಲಿಪ್ ಹ್ಯೂಜ್ (2), ನಾಯಕ ರಿಕಿ ಪಾಂಟಿಂಗ್ (12), ಮೈಕಲ್ ಕ್ಲಾರ್ಕ್ (7) ಮತ್ತು ಸ್ಟೀವನ್ ಸ್ಮಿತ್ (7) ವಿಫಲರಾದರು. ಆದರೆ ಕೊನೆಯ ಹಂತದಲ್ಲಿ ಬಂದ ಪೀಟರ್ ಸಿದ್ಲೇ 35 ರನ್ನುಗಳ ಅಜೇಯ ಇನ್ನಿಂಗ್ಸ್ ಕಟ್ಟಿದರು.
ಮಾರಕ ದಾಳಿ ಸಂಘಟಿಸಿದ ಕ್ರಿಸ್ ಟ್ರೆಮ್ಲೆಟ್ ಮತ್ತು ಜೇಮ್ಸ್ ಆಂಡ್ರೆಸನ್ ತಲಾ ಮೂರು ವಿಕೆಟ್ ಕಿತ್ತರು. ಹಾಗೆಯೇ ಸ್ಟೀವನ್ ಫಿನ್ ಮತ್ತು ಗ್ರೇಮ್ ಸ್ವಾನ್ ತಲಾ ಎರಡು ವಿಕೆಟ್ ಕಿತ್ತರು.
ನಂತರ ಜವಾಬು ನೀಡಲಾರಂಭಿಸಿದ ಇಂಗ್ಲೆಂಡ್ ಮೊದಲ ದಿನದಂತ್ಯಕ್ಕೆ 12 ಓವರುಗಳಲ್ಲಿ ವಿಕೆಟ್ ನಷ್ಟವಿಲ್ಲದೆ 29 ರನ್ ಗಳಿಸಿದೆ. ನಾಯಕ ಆಂಡ್ರ್ಯೂ ಸ್ಟ್ರಾಸ್ (12) ಮತ್ತು ಆಲಿಸ್ಟಾರ್ ಕುಕ್ (17) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.