ಮೊದಲ ಇನ್ನಿಂಗ್ಸ್‌ನಲ್ಲಿ ಭಾರತೀಯರು ಪೆವಿಯನ್ ಪರೇಡ್ ನಡೆಸಿದ್ದರೆ ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳು ಕ್ರೀಸಿನಿಂದ ಕದಲುತ್ತಿಲ್ಲ. ಆ ಮೂಲಕ ಸೆಂಚುರಿಯನ್ ಮೈದಾನದಲ್ಲಿ ರನ್ನುಗಳ ಹೊಳೆಯನ್ನೇ ಹರಿಸುತ್ತಿದ್ದಾರೆ.
ಪ್ರತಿ ಬಾರಿಯೂ ಭಾರತದ ಸವಾಲನ್ನು ದಿಟ್ಟವಾಗಿ ಸ್ವೀಕರಿಸುತ್ತಿರುವ ಹಾಶೀಮ್ ಆಮ್ಲಾ (116*) ಮತ್ತು ಜಾಕ್ವಾಸ್ ಕಾಲಿಸ್ (102*) ಬಾರಿಸಿದ ಅಮೋಘ ಶತಕಗಳ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು ದ್ವಿತೀಯ ದಿನದಂತ್ಯಕ್ಕೆ 87 ಓವರುಗಳಲ್ಲಿ ಕೇವಲ ಎರಡು ವಿಕೆಟ್ 366 ರನ್ನುಗಳ ಬೃಹತ್ ಮೊತ್ತ ಪೇರಿಸಿದ್ದು, 230 ರನ್ನುಗಳ ಮಹತ್ವದ ಮುನ್ನಡೆ ದಾಖಲಿಸಿದೆ.
ಮೊನಚು ಕಳೆದುಕೊಂಡ ಭಾರತ ಬೌಲರುಗಳನ್ನು ನಿರತಂಕವಾಗಿ ದಂಡಿಸುತ್ತಾ ಸಾಗಿದ ಈ ಬ್ಯಾಟ್ಸ್‌ಮನ್‌ಗಳು ಪ್ರವಾಸಿಗರಿಗೆ ಸ್ಪಷ್ಟ ಸಂದೇಶ ರವಾನಿಸಿದರು. ಪಂದ್ಯದಲ್ಲಿ ವೇಗಿ ಜಹೀರ್ ಖಾನ್ ಅನುಪಸ್ಥಿತಿಯು ಎದ್ದು ಕಾಣುತ್ತಿತ್ತು.
ಆರಂಭಿಕರು ಹಾಕಿಕೊಟ್ಟ ಭದ್ರ ಅಡಿಪಾಯವನ್ನು ಮುಂದುವರಿಸಿದ್ದ ಆಮ್ಲಾ-ಕಾಲಿಸ್ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು. ನಾಯಕ ಗ್ರೇಮ್ ಸ್ಮಿತ್ ಮತ್ತು ಆಲ್ವಿರೊ ಪೀಟರ್‌ಸನ್ ಮೊದಲ ವಿಕೆಟ್‌ಗೆ 111 ರನ್ ಪೇರಿಸಿದ್ದರು. ಸ್ಮಿತ್ 62 ಹಾಗೂ ಪೀಟರ್‌ಸನ್ 77 ರನ್ನುಗಳ ಅಮೋಘ ಇನ್ನಿಂಗ್ಸ್ ಕಟ್ಟಿದರು.
ಇವರಿಬ್ಬರ ವಿಕೆಟುಗಳನ್ನು ಪಡೆದ ಹರಭಜನ್ ಸಿಂಗ್ ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು. ಆದರೆ ಮೂರನೇ ವಿಕೆಟ್‌ಗೆ ಮುರಿಯದ ದ್ವಿಶತಕ ಜತೆಯಾಟ ನೀಡಿರುವ ಆಮ್ಲಾ-ಕಾಲಿಸ್ ಭಾರತೀಯ ಪಾಲಿಗೆ ಕಂಟಕವಾದರು.
PTI
180 ಎಸೆತಗಳನ್ನು ಎದುರಿಸಿದ ಆಮ್ಲಾ ಒಂಬತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 116 ರನ್ ಗಳಿಸಿದರು. ಅದೇ ರೀತಿ ಕಾಲಿಸ್ 144 ಎಸೆತಗಳಲ್ಲಿ 102 ರನ್ ಗಳಿಸಿದ್ದು, ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅವರ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಹಾಗೂ ಮೂರು ಸಿಕ್ಸರುಗಳು ಸೇರಿದ್ದವು.
ಒಂದೆಡೆ ದಕ್ಷಿಣ ಆಫ್ರಿಕಾ ವೇಗಿಗಳ ದಾಳಿಗೆ ಭಾರತ 136 ರನ್ನುಗಳಿಗೆ ಹೀನಾಯವಾಗಿ ಕುಸಿತ ಕಂಡಿದ್ದರೆ ಮತ್ತೊಂದೆಡೆ ಭಾರತೀಯ ವೇಗಿಗಳಿಗೆ ದಿನದಾಟದಲ್ಲಿ ಒಂದೇ ಒಂದು ವಿಕೆಟ್ ಕಬಳಿಸಲು ಸಾಧ್ಯವಾಗಲಿಲ್ಲ. ಉಪಖಂಡದ ಪಿಚ್‌ನಲ್ಲಿ ಪ್ರಭಾವಿ ಎನಿಸಿಕೊಂಡಿದ್ದ ವೇಗಿ ಶ್ರೀಶಾಂತ್ ಮತ್ತು ಇಶಾಂತ್ ಸಾಕಾಷ್ಟು ಬೆವರಿಳಿಸುವಂತಾಗಿತ್ತು. ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ಸೌರಾಷ್ಟ್ರ ಎಡಗೈ ವೇಗಿ ಜೈದೇವ್ ಉನದ್ಕತ್ ಕೂಡಾ ಲಯ ಕಂಡುಕೊಳ್ಳಲು ವಿಫಲರಾದರು.
ಒಟ್ಟಿನಲ್ಲಿ ಟೆಸ್ಟ್‌ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ವಿದೇಶಗಳ ಪಿಚ್‌ಗಳಲ್ಲಿ ಕೇವಲ ಕಾಗದದ ಹುಲಿಗಳು ಎಂಬ ವಾದಕ್ಕೆ ಇಂತಹ ಹೀನಾಯ ಪ್ರದರ್ಶನಗಳು ಮತ್ತಷ್ಟು ಪುಷ್ಠಿ ನೀಡುವಂತಾಗಿದೆ.