ವಿಶ್ವಕಪ್ ಸಂಭಾವ್ಯರು; ವಿನಯ್ ಕರ್ನಾಟಕದ ಏಕೈಕ ಆಟಗಾರ

ಶನಿವಾರ, 18 ಡಿಸೆಂಬರ್ 2010 (16:56 IST)
ಮುಂಬರುವ ಪ್ರತಿಷ್ಠಿತ ಏಕದಿನ ವಿಶ್ವಕಪ್‌ಗಾಗಿನ ಭಾರತೀಯ ಸಂಭವನೀಯರ ಪಟ್ಟಿಯನ್ನು ಘೋಷಿಸಲಾಗಿದ್ದು, ವೇಗಿ ವಿನಯ್ ಕುಮಾರ್ ಅವಕಾಶ ಪಡೆದ ಕರ್ನಾಟಕದ ಏಕೈಕ ಆಟಗಾರ ಎಂದೆನಿಸಿಕೊಂಡಿದ್ದಾರೆ.

ಭಾರತದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಲ್‌ರೌಂಡರ್ ಇರ್ಫಾನ್ ಪಠಾಣ್ ಸ್ಥಾನ ಗಿಟ್ಟಿಸಲು ವಿಫಲರಾಗಿರುವುದು ಸಾಕಷ್ಟು ಟೀಕೆಗೆ ಕಾರಣವಾಗುತ್ತಿದೆ. ಅಂದು ಪಾಕಿಸ್ತಾನ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಪಠಾಣ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಆಯ್ಕೆ ಸಮಿತಿಯು ಈ ಆಲ್‌ರೌಂಡರ್ ಆಟಗಾರನನ್ನು ಕಡೆಗಣಿಸಿದೆ.

ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ಸಮಿತಿಯು 30 ಮಂದಿ ಸದಸ್ಯರ ಸಂಭವನೀಯರ ಪಟ್ಟಿಯನ್ನು ಬಿಡುಗಡೆಗೂಳಿಸಿದ್ದು, ಜನವರಿ 19ಕ್ಕೂ ಮೊದಲು ತಂಡವನ್ನು ಅಂತಿಮಗೊಳಿಸಲಾಗುತ್ತದೆ.

ಇರ್ಫಾನ್ ಸಹೋದರ ಯೂಸುಫ್ ಪಠಾಣ್ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ರೀತಿ ಇನ್ನಷ್ಟೇ ಅಂತರಾಷ್ಟ್ರೀಯ ಪಂದ್ಯವನ್ನಾಡಬೇಕಾಗಿರುವ ಮುಂಬೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯಾ ರಹಾನೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಹೊಸಮುಖ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿಕೊಂಡಿದ್ದ ಚೇತೇಶ್ವರ ಪೂಜಾರ, ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಕೂಡಾ ಸಾಧ್ಯತಾ ಪಟ್ಟಿಯಲ್ಲಿದ್ದಾರೆ.

ನಾಯಕ ಮಹೇಂದ್ರ ಸಿಂಗ್ ಹೊರತುಪಡಿಸಿ ತಂಡವು ಇತರ ಮೂವರು ವಿಕೆಟ್ ಕೀಪರುಗಳನ್ನು ಹೊಂದಿದೆ. ನ್ಯೂಜಿಲೆಂಡ್ ವಿರುದ್ಧದ ಕೊನೆಯ ಎರಡೂ ಏಕದಿನಗಳಲ್ಲಿ ಅರ್ಧಶತಕ ಬಾರಿಸಿದ್ದ ಗುಜರಾತ್‌ನ ಪಾರ್ಥಿವ್ ಪಟೇಲ್, ತಮಿಳುನಾಡಿದ ದಿನೇಶ್ ಕಾರ್ತಿಕ್ ಮತ್ತು ಬಂಗಾಳದ ವೃದ್ದೀಮಾನ್ ಸಹಾ ಪಟ್ಟಿಯಲ್ಲಿದ್ದಾರೆ.

2011ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ ಸಹಿತ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಆತಿಥ್ಯ ವಹಿಸುತ್ತದೆ. ತವರಿನಲ್ಲೇ ನಡೆಯಲಿರುವ ಈ ಮಹಾಕೂಟದಲ್ಲಿ ಭಾರತ ಗೆಲುವು ದಾಖಲಿಸಿದೆಯೆಂದು ಅಭಿಮಾನಿಗಳು ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ಮಿಥುನ್‌ಗೆ ಅವಕಾಶವಿಲ್ಲ....
ಮತ್ತೊಂದೆಡೆ ಕರ್ನಾಟಕದ ಪಾಲಿಗೂ ವಿಶ್ವಕಪ್ ಸಂಭವನೀಯರ ಪಟ್ಟಿ ಸಾಕಷ್ಟು ನಿರಾಸೆಯನ್ನುಂಟು ಮಾಡಿದೆ. ವೇಗಿ ಅಭಿಮನ್ಯು ಮಿಥುನ್ ಅವರಿಗೆ ಅವಕಾಶ ನೀಡುವ ನಿರೀಕ್ಷೆಯಿತ್ತಾದರೂ ಆಯ್ಕೆ ಸಮಿತಿಯು ಈ ಯುವ ವೇಗಿಯನ್ನು ಪರಿಗಣಿಸಿಲ್ಲ.

ಒಂದು ಕಾಲದಲ್ಲಿ ಕರ್ನಾಟಕದ ಐವರು ಆಟಗಾರರು ತಂಡದ ಆಡುವ ಬಳಗದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದೀಗ 30 ಮಂದಿಯ ಸಂಭವನೀಯರ ಪಟ್ಟಿಯಲ್ಲಿ ಕೇವಲ ಏಕೈಕ ಆಟಗಾರ ಮಾತ್ರ ಸ್ಥಾನ ಪಡೆದಿರುವುದಕ್ಕೆ ಆಯ್ಕೆ ಸಮಿತಿಯ ನಿರ್ಲಕ್ಷವೇ ಕಾರಣ ಅಥವಾ ರಾಜ್ಯದಲ್ಲಿ ಪ್ರತಿಭಾವಂತ ಆಟಗಾರರ ಕೊರತೆ ಇದೆಯೇ ಎಂಬುದು ಚರ್ಚೆಯ ವಿಷಯ.

ಮಿಥುನ್ ಸಹಿತ ಹಿರಿಯ ಅನುಭವಿ ರಾಹುಲ್ ದ್ರಾವಿಡ್ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಕೂಡಾ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. 2007ರ ಟ್ವೆಂಟಿ-20 ವಿಶ್ವಕಪ್ ಜಯದಲ್ಲಿ ಉತ್ತಪ್ಪ ಪಾತ್ರವೂ ನಿರ್ಣಾಯಕವೆನಿಸಿತ್ತು ಎಂಬುದನ್ನು ಮರೆಯುವಂತಿಲ್ಲ. ಹಾಗೆಯೇ ಸತತ ಎರಡನೇ ರಣಜಿ ಋತುವಿನಲ್ಲಿ ಅಮೋಘ ಫಾರ್ಮ್ ಮುಂದುವರಿಸಿರುವ ಮನೀಷ್ ಪಾಂಡೆ ಅವರು ಕೂಡಾ ಆಯ್ಕೆ ಸಮಿತಿಗೆ ಬೇಡವಾಗಿದ್ದಾರೆ.

ವಿಶ್ವಕಪ್‌ಗಾಗಿನ ಭಾರತದ ಸಂಭಾವ್ಯರ ಪಟ್ಟಿ:

1. ಮಹೇಂದ್ರ ಸಿಂಗ್ ಧೋನಿ
2. ವೀರೇಂದ್ರ ಸೆಹ್ವಾಗ್
3. ಸಚಿನ್ ತೆಂಡೂಲ್ಕರ್
4. ಗೌತಮ್ ಗಂಭೀರ್
5. ವಿರಾಟ್ ಕೊಹ್ಲಿ
6. ಯುವರಾಜ್ ಸಿಂಗ್
7. ಸುರೇಶ್ ರೈನಾ
8. ಹರಭಜನ್ ಸಿಂಗ್
9. ಜಹೀರ್ ಖಾನ್
10. ಪ್ರವೀಣ್ ಕುಮಾರ್
11. ಆಶೀಶ್ ನೆಹ್ರಾ
12. ಎಸ್. ಶ್ರೀಶಾಂತ್
13. ಮುನಾಫ್ ಪಟೇಲ್
14. ಇಶಾಂತ್ ಶರ್ಮಾ
15. ವಿನಯ್ ಕುಮಾರ್
16. ಮುರಳಿ ವಿಜಯ್
17. ರೋಹಿತ್ ಶರ್ಮಾ
18. ರವೀಂದ್ರ ಜಡೇಜಾ
19. ಅಜಿಂಕ್ಯಾ ರಹಾನೆ
20. ಸೌರಬ್ ತಿವಾರಿ
21. ಯೂಸುಫ್ ಪಠಾಣ್
22. ಪಾರ್ಥಿವ್ ಪಟೇಲ್
23. ಆರ್. ಅಶ್ವಿನ್
24. ವೃದ್ದೀಮಾನ್ ಸಹಾ
25. ದಿನೇಶ್ ಕಾರ್ತಿಕ್
26. ಶಿಖರ್ ಧವನ್
27. ಅಮಿತ್ ಮಿಶ್ರಾ
28. ಪಿಯೂಷ್ ಚಾವ್ಲಾ
29. ಚೇತೇಶ್ವರ ಪೂಜಾರಾ
30. ಪ್ರಗ್ಯಾನ್ ಓಜಾ

ವೆಬ್ದುನಿಯಾವನ್ನು ಓದಿ