ಸಚಿನ್ 111 ನಾಟೌಟ್; ಭಾರತಕ್ಕೆ ಇನ್ನಿಂಗ್ಸ್ ಸೋಲು

ಸೋಮವಾರ, 20 ಡಿಸೆಂಬರ್ 2010 (14:35 IST)
ಭಾನುವಾರವಷ್ಟೇ ಟೆಸ್ಟ್ ಕ್ರಿಕೆಟ್‌ನಲ್ಲಿ 50ನೇ ಶತಕ ಬಾರಿಸಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (111*) ಅವರ ಅಮೋಘ ಇನ್ನಿಂಗ್ಸ್‌ನ ಹೊರತಾಗಿಯೂ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 25 ರನ್ ಅಂತರದಲ್ಲಿ ಕಳೆದುಕೊಂಡಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದ ಹಿನ್ನೆಡೆ ಅನುಭವಿಸಿದೆ.

454/8 ಎಂಬಲ್ಲಿದ್ದ ಕೊನೆಯ ದಿನದಾಟ ಆರಂಭಿಸಿದ್ದ ಭಾರತ 128.1 ಓವರುಗಳಲ್ಲಿ 459 ರನ್ನುಗಳಿಗೆ ಆಲೌಟಾಗುವ ಮೂಲಕ ಹೀನಾಯ ಸೋಲಿಗೆ ಒಳಗಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 136 ರನ್ನುಗಳ ಸಾಧಾರಣ ಮೊತ್ತಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ಜಾಕ್ವಾಸ್ ಕಾಲಿಸ್ ಬಾರಿಸಿದ ಅಮೋಘ ದ್ವಿಶತಕ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ 620 ರನ್ನುಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತ್ತು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಪಂದ್ಯಶ್ರೇಷ್ಠ: ಜಾಕ್ವಾಸ್ ಕಾಲಿಸ್

PTI
ಆ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 484 ರನ್ನುಗಳ ಬೃಹತ್ ಹಿನ್ನೆಡೆ ಅನುಭವಿಸಿದ್ದ ಭಾರತಕ್ಕೆ ಪಂದ್ಯ ಉಳಿಸಿಕೊಳ್ಳುವ ಬದಲು ಇನ್ನಿಂಗ್ಸ್ ಸೋಲನ್ನು ತಪ್ಪಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಆದರೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿದ್ದ ಭಾರತ ಪಂದ್ಯದಲ್ಲಿ ಸೋಲು ಅನುಭವಿಸಿದರೂ ನೈತಿಕ ಬಲವನ್ನು ಹೆಚ್ಚಿಸಿಕೊಂಡತಾಂಗಿದೆ.

ಇದೇ ಟೆಸ್ಟ್ ಪಂದ್ಯದಲ್ಲಿ ನಾಲ್ಕನೇ ದಿನವಾದ ಭಾನುವಾರ ಸಚಿನ್ ಅವರ 50ನೇ ಟೆಸ್ಟ್ ಶತಕಕ್ಕೆ ಸಾಕ್ಷ್ಮವಹಿಸಿತ್ತು. 327 ನಿಮಿಷಗಳ ಕಾಲ ಕ್ರೀಸಿನಲ್ಲಿ ನೆಲೆಯೂರಿ ನಿಂತ ಲಿಟ್ಲ್ ಮಾಸ್ಟರ್ 241 ಎಸೆತಗಳಲ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 111 ರನ್ ಗಳಿಸಿ ಔಟಾಗದೆ ಉಳಿದರು. ಆದರೆ ಬಾಲಂಗೋಚಿಗಳಾದ ಎಸ್. ಶ್ರೀಶಾಂತ್ (3), ಜೈದೇವ್ ಉನದ್ಕತ್ (1) ಹೆಚ್ಚು ಹೊತ್ತು ನಿಲ್ಲಲಿಲ್ಲ.

ದಕ್ಷಿಣ ಆಫ್ರಿಕಾ ಪರ ವೇಗಿ ಡೇಲ್ ಸ್ಟೈನ್ ನಾಲ್ಕು ಹಾಗೂ ಮೊರ್ನೆ ಮೊರ್ಕೆಲ್ ಮತ್ತು ಪಾಲ್ ಹ್ಯಾರಿಸ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.

ಸಂಕ್ಷಿಪ್ತ ಸ್ಕೋರ್ ಪಟ್ಟಿ:
ಭಾರತ 136 ಮತ್ತು 459
ದಕ್ಷಿಣ ಆಫ್ರಿಕಾ 620/4 ಡಿಕ್ಲೇರ್

ಪಂದ್ಯದ ಪ್ರಮುಖಾಂಶಗಳು:
- 50ನೇ ಟೆಸ್ಟ್ ಶತಕ ಬಾರಿಸಿದ ಸಚಿನ್
- ಲಾರಾ ದಾಖಲೆ ಹಿಮ್ಮೆಟ್ಟಿಸಿದ ದ್ರಾವಿಡ್
- ಟೆಸ್ಟ್‌ನಲ್ಲಿ 12 ಸಾವಿರ ರನ್ ಪೂರೈಸಿದ ದ್ರಾವಿಡ್
- ಜಾಕ್ವಾಸ್ ಕಾಲಿಸ್ ಚೊಚ್ಚಲ ದ್ವಿಶತಕ (201*)
- ಮೊರ್ನೆ ಮೊರ್ಕೆಲ್ ಜೀವನಶ್ರೇಷ್ಠ ಸಾಧನೆ (20ಕ್ಕೆ 5 ವಿಕೆಟ್)
- ಆಮ್ಲಾ (140), ವಿಲಿಯರ್ಸ್ (129) ಶತಕಗಳ ಸಾಧನೆ
- ಜೈದೇವ್ ಉನದ್ಕತ್ ಪದಾರ್ಪಣೆ

ವೆಬ್ದುನಿಯಾವನ್ನು ಓದಿ