ಬೌಲಿಂಗ್ ವಿಭಾಗ ಚಿಂತೆ ತಂದಿದೆ: ಎಂ.ಎಸ್.ಧೋನಿ

ಮಂಗಳವಾರ, 21 ಡಿಸೆಂಬರ್ 2010 (11:09 IST)
ಆತಿಥೇಯ ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್‌ನಲ್ಲಿ ಕೇವಲ 136ಕ್ಕೆ ವಿಕೆಟ್ ಒಪ್ಪಿಸಿರುವುದು ಭಾನುವಾರದ ಟೆಸ್ಟ್ ಸೋಲಿಗೆ ಪ್ರಧಾನ ಕಾರಣ ಎಂಬುದನ್ನು ಒಪ್ಪಿಕೊಂಡ ನಾಯಕ ಮಹೇಂದ್ರ ಸಿಂಗ್ ಧೋನಿ, ಆದರೆ, ಬೌಲಿಂಗ್ ಆತಂಕಕಾರಿಯಾದ ವಿಷಯ ಎಂದೂ ಸೇರಿಸಿದ್ದಾರೆ.

ಟೆಸ್ಟ್ ಪಂದ್ಯ ಗೆಲ್ಲಬೇಕಿದ್ದರೆ, 20 ವಿಕೆಟ್‌ಗಳನ್ನು ಕಬಳಿಸಬೇಕಾಗುತ್ತದೆ. ಹಾಗಿರುವಾಗ ಬೌಲಿಂಗ್ ಕ್ಷೇತ್ರ ಅತ್ಯಂತ ಸದೃಢವಾಗಿರಬೇಕು ಎಂದು ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಧೋನಿ ಹೇಳಿದರು.

ಹೆಚ್ಚಿನ ಬ್ಯಾಟುಗಾರರು ಒಳ್ಳೆಯ ಆರಂಭ ಕಂಡಿದ್ದರು. ಇದು ಡರ್ಬನ್‌ನಲ್ಲಿಯೂ ಮುಂದುವರಿಯಬೇಕಿದೆ ಎಂದ ಅವರು, ಮತ್ತೊಂದು ಆತಂತಕಾರಿ ಅಂಶವೆಂದರೆ ಓವರ್ ಎಸೆಯುವ ವೇಗ. ಒಂದು ಹಂತದಲ್ಲಿ ನಾವು ನಿಗದಿತ ಸಮಯಕ್ಕಿಂತ ಐದುವರೆ ಓವರುಗಳಷ್ಟು ಹಿಂದಿದ್ದೆವು. ಅದರಲ್ಲಿ ಸುಧಾರಣೆಯಾಗಬೇಕಿದೆ. ಕೊಟ್ಟ ಸಮಯದಲ್ಲಿ ನಮ್ಮ ಓವರುಗಳ ಕೋಟಾ ಮುಗಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಟೆಸ್ಟ್ ಪಂದ್ಯದಲ್ಲಿ ಒಂದೋ ವಿಕೆಟ್ ಕೀಳುತ್ತಿರಬೇಕು ಇಲ್ಲವೇ, ಓವರಿಗೆ ಐದರಂತೆ ರನ್ನು ತೆಗೆಯಲು ಎದುರಾಳಿಗಳಿಗೆ ಬಿಡಬಾರದು ಎಂದ ಧೋನಿ, ಆದರೆ ಇಲ್ಲಿ ಪರಿಸ್ಥಿತಿ ಭಾರತಕ್ಕಿಂತ ಭಿನ್ನ, ಇಲ್ಲಿ ಸ್ಕೋರ್ ಮಾಡುವುದು ಸುಲಭ. ಚೆಂಡು ನೇರವಾಗಿ ಬ್ಯಾಟಿಗೆ ಬರುತ್ತದೆ ಮತ್ತು ವಿಕೆಟಿನ ಎರಡೂ ಕಡೆಗಳಿಂದ ರನ್ ಮಾಡಬಹುದು. ಇದು ಕೂಡ ಯೋಚಿಸಬೇಕಾದ ವಿಚಾರ. ವಿಕೆಟ್ ಕಳೆದುಕೊಳ್ಳುತ್ತಿದ್ದರೂ ನಮ್ಮ ಸ್ಕೋರಿಂಗ್ ರೇಟ್ ಉತ್ತಮವಾಗಿತ್ತು ಎಂದರು.

ವೆಬ್ದುನಿಯಾವನ್ನು ಓದಿ