ಸಚಿನ್ ಸೆಂಚುರಿ ಸಿಡಿಸಿದರೆ ಭಾರತಕ್ಕೆ ಗೆಲುವು ದೂರ?

ಶುಕ್ರವಾರ, 24 ಡಿಸೆಂಬರ್ 2010 (12:16 IST)
'ಸಚಿನ್ ತೆಂಡೂಲ್ಕರ್ ಸೆಂಚುರಿ ಬಾರಿಸಿದರೆ ಭಾರತ ಪಂದ್ಯವನ್ನು ಕಳೆದುಕೊಳ್ಳುತ್ತದೆ' ಎಂಬ ಅಪವಾದವೂ ಈ ಹಿಂದಿನಿಂದಲೇ ಕೇಳುತ್ತಲೇ ಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಸಚಿನ್ ದಾಖಲೆಗಳನ್ನು ಪರೀಶೀಲಿಸಿದಾಗ ಗಮನಕ್ಕೆ ಬರುತ್ತಿವೆ.

ಹೀಗಾಗಿ ಸಚಿನ್ ಕೇವಲ ತಮ್ಮ ವೈಯಕ್ತಿಕ ದಾಖಲೆಗಾಗಿ ಮಾತ್ರವೇ ಆಡುತ್ತಿದ್ದಾರೆ ಎಂಬ ಪ್ರಶ್ನೆ ಬಲವಾಗುತ್ತದೆ. ಇತ್ತೀಚೆಗಷ್ಟೇ ಸಚಿನ್ ದಕ್ಷಿಣ ಆಫ್ರಿಕಾ ವಿರುದ್ಧ 50ನೇ ಟೆಸ್ಟ್ ಶತಕ ದಾಖಲಿಸಿ ಐತಿಹಾಸಿಕ ಸಾಧನೆ ಮಾಡಿದ್ದರೂ ಆ ಪಂದ್ಯವನ್ನು ಭಾರತ ಕಳೆದುಕೊಂಡಿರುವುದು ಇದಕ್ಕೆ ಲಭಿಸಿರುವ ಕೊನೆಯ ನಿದರ್ಶನ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಒಟ್ಟು 175 ಅಂತರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನಾಡಿರುವ ಸಚಿನ್ 56.91ರ ಸರಾಸರಿಯಲ್ಲಿ ಒಟ್ಟು 14,500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಅವರು ದಾಖಲಿಸಿದ 50 ಶತಕಗಳ ಪೈಕಿ 20 ಬಾರಿಯಷ್ಟೇ ಭಾರತ ಗೆಲುವನ್ನು ದಾಖಲಿಸಿದೆ. ಅಂದರೆ ಉಳಿದ 30 ಪಂದ್ಯಗಳನ್ನು ಭಾರತ ಕಳೆದುಕೊಂಡಿತ್ತು ಎಂದರ್ಥವಲ್ಲ.

ಉಳಿದ 19 ಪಂದ್ಯಗಳಲ್ಲಿ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದ ಲಿಟ್ಲ್ ಮಾಸ್ಟರ್ ಪಂದ್ಯವನ್ನು ಡ್ರಾ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಹಾಗೆಯೇ ಇನ್ನುಳಿದ 11 ಪಂದ್ಯಗಳಲ್ಲಿ ಭಾರತ ಸೋಲುಂಡಿತ್ತು.

ಅಂದಹಾಗೆ ಸಚಿನ್ ಸೆಂಚುರಿ ಬಾರಿಸಿದರೆ ಆ ಪಂದ್ಯದಲ್ಲಿ ಭಾರತ ಸೋಲುತ್ತದೆ ಎಂದು ಹೇಳುವುದು ತಪ್ಪಾಗಬಹುದು. ಯಾಕೆಂದರೆ ಕೇವಲ 20 ಬಾರಿಯಷ್ಟೇ ಪಂದ್ಯವನ್ನು ಭಾರತ ಗೆದ್ದಿರಬಹುದು. ಆದರೆ ಉಳಿದ 19 ಬಾರಿ ಸಚಿನ್ ಶತಕದ ನೆರವಿನಿಂದಲೇ ಭಾರತ ಪಂದ್ಯ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು ಎಂಬುದನ್ನು ಮರೆಯುವಂತಿಲ್ಲ.

ಈ 50 ಶತಕಗಳ ಪೈಕಿ ಸಚಿನ್ 15 ಬಾರಿ ಔಟಾಗದೆ ಉಳಿದಿದ್ದರು. ಹಾಗೆಯೇ 6 ಬಾರಿ ದ್ವಿಶತಕದ ಸಾಧನೆ ಮಾಡಿದ್ದಾರೆ. 2004-05ರಲ್ಲಿ ಬಾಂಗ್ಲಾದೇಶ ವಿರುದ್ಧ ಸರ್ವಾಧಿಕ 248 ರನ್ ಗಳಿಸಿದ್ದ ಲಿಟ್ಲ್ ಮಾಸ್ಟರ್, ಬ್ರ್ಯಾನ್ ಲಾರಾ ಅವರ ಹೆಸರಲ್ಲಿದ್ದ ಅತಿ ಹೆಚ್ಚು ಬಾರಿಯ ಶತಕೋತ್ತರ ಅರ್ಧಶತಕದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಯಿಸಿಕೊಂಡಿದ್ದರು. ಲಾರಾ 19 ಬಾರಿ ಈ ಸಾಧನೆ ಮಾಡಿದ್ದರು. ಸಚಿನ್ ಇದೀಗ 20 ಬಾರಿ 150ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ