ಕಿವೀಸ್; ಮೊದಲ ಟ್ವೆಂಟಿ-20ಯಲ್ಲಿ ಪಾಕಿಗಳು ಧೂಳೀಪಟ

ಭಾನುವಾರ, 26 ಡಿಸೆಂಬರ್ 2010 (13:18 IST)
ಟಿಮ್ ಸೌಥೀ ಹ್ಯಾಟ್ರಿಕ್ ಹಾಗೂ ಮಾರ್ಟಿನ್ ಗುಪ್ತಿಲ್ ಅಮೂಲ್ಯ ಅರ್ಧಶತಕದ ನೆರವಿನಿಂದ ನ್ಯೂಜಿಲೆಂಡ್ ಮೊದಲ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಪಾಕಿಸ್ತಾನವನ್ನು ಐದು ವಿಕೆಟುಗಳಿಂದ ಬಗ್ಗುಬಡಿದಿದೆ.

ಕೇವಲ ಎಂಟು ಎಸೆತಗಳ ಅಂತರದಲ್ಲಿ ಸೌಥೀ 18 ರನ್ನುಗಳಿಗೆ ಐದು ವಿಕೆಟ್ ಕಿತ್ತು, ನ್ಯೂಜಿಲೆಂಡ್ ಆಟಗಾರನೊಬ್ಬ ಅಂತಾರಾಷ್ಟ್ರೀಯ ಟ್ವೆಂಟಿ-20 ಪಂದ್ಯದಲ್ಲಿ ಮೊದಲ ಬಾರಿ ಐದು ವಿಕೆಟ್ ಪಡೆದ ಸಾಧನೆ ಮಾಡಿದರು. ಆ ಮೂಲಕ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಯಲ್ಪಟ್ಟ ಪಾಕಿಸ್ತಾನೀಯರನ್ನು 143-9ಕ್ಕೆ ಆತಿಥೇಯರು ನಿಯಂತ್ರಿಸಿದರು.

ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಆತಿಥೇಯರಿಗೆ ರೋಸ್ ಟೇಲರ್ ನಾಯಕ.

144 ರನ್ನುಗಳ ಗೆಲುವಿನ ಗುರಿ ಪಡೆದಿದ್ದ ನ್ಯೂಜಿಲೆಂಡ್‌ಗೆ ಪ್ರಮುಖ ಆಸರೆಯಾಗಿದ್ದು ಮಾರ್ಟಿನ್ ಗುಪ್ತಿಲ್. ಅವರು 29 ಎಸೆತಗಳಿಂದ ಅರ್ಧಶತಕ (54) ದಾಖಲಿಸಿದರು. ನಾಲ್ಕು ಬೌಂಡರಿ ಹಾಗೂ ನಾಲ್ಕು ಸಿಕ್ಸರುಗಳು ಅವರ ಹೊಡೆತದಲ್ಲಿದ್ದವು.

ರೋಸ್ ಟೇಲರ್ (39) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. 31 ಎಸೆತಗಳನ್ನು ಎದುರಿಸಿದ್ದ ಟೇಲರ್ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದರು.

ಒಟ್ಟಾರೆ 17.1 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸುವ ಮೂಲಕ ಮೂರು ಟ್ವೆಂಟಿ-20 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಮುನ್ನಡೆ ಪಡೆಯಿತು.

ಪಾಕಿಸ್ತಾನ ತಂಡದಲ್ಲಿ ಒಂದಂಕಿ ದಾಟಿದ್ದು ನಾಯಕ ಶಾಹಿದ್ ಆಫ್ರಿದಿ (20), ಮೊಹಮ್ಮದ್ ಹಫೀಜ್ (24), ಅಹ್ಮದ್ ಶೆಹ್ಜಾದ್ (14), ಉಮರ್ ಗುಲ್ (30) ಮತ್ತು ಅಜೇಯರಾಗುಳಿದ ವಹಾಬ್ ರಿಯಾಜ್ (30) ಮಾತ್ರ.

ಸೌಥೀಯನ್ನು ಹೊರತುಪಡಿಸಿ ಪ್ರವಾಸಿಗರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದು ಕೈಲ್ ಮಿಲ್ಸ್. ಅವರು 37 ರನ್ನುಗಳಿಗೆ ಮೂರು ವಿಕೆಟ್ ಪಡೆದಿದ್ದರು. ಸ್ಕಾಟ್ ಸ್ಟೈರಿಸ್ ಒಂದು ವಿಕೆಟ್ ಕಿತ್ತಿದ್ದರು.

ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಸೌಥೀ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ