ಆಶಸ್ ಬಾಕ್ಸಿಂಗ್ ಡೇ: ಆಸ್ಟ್ರೇಲಿಯಾ 98ಕ್ಕೆ ಆಲೌಟ್..!

ಭಾನುವಾರ, 26 ಡಿಸೆಂಬರ್ 2010 (13:26 IST)
ಪ್ರತಿಷ್ಠಿತ ಆಶಸ್ ಸರಣಿ ಕದನ ಕುತೂಹಲ ಮೇರೆ ಮೀರಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಪಾರಮ್ಯ ಕಳೆದುಕೊಂಡಿರುವ ಕಾಂಗರೂಗಳು ಮತ್ತೆ ಸರಣಿಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದು, ನಾಲ್ಕನೇ ಟೆಸ್ಟ್‌ನ ಆರಂಭಿಕ ದಿನ ಕೇವಲ 98 ರನ್ನುಗಳಿಗೆ ಸರ್ವಪತನ ಕಂಡಿದ್ದಾರೆ. ಆ ಮೂಲಕ ಐತಿಹಾಸಿಕ ಅಪಮಾನಕ್ಕೊಳಗಾಗಿದ್ದಾರೆ.

ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡಿನಲ್ಲಿ ನಡೆದ ಆಶಸ್ ಸರಣಿಯ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಕಳೆದ 133 ವರ್ಷಗಳಲ್ಲಿ ಅತಿ ಕಡಿಮೆ ಮೊತ್ತಕ್ಕೆ ಗಂಟು ಮೂಟೆ ಕಟ್ಟಿದ ದಾಖಲೆ ನಿರ್ಮಿಸಿದೆ. ಬೌಲಿಂಗ್‌ನಲ್ಲಿ ಮಿಂಚಿ ಆತಿಥೇಯರನ್ನು ಕೆಡವಿದ ಇಂಗ್ಲೆಂಡ್, 59 ರನ್ನುಗಳ ಮುನ್ನಡೆ ಪಡೆದು ಪಂದ್ಯದಲ್ಲಿ ಪ್ರಭುತ್ವ ಸಾಧಿಸುವ ಸ್ಪಷ್ಟ ಸೂಚನೆಗಳನ್ನು ರವಾನಿಸಿದೆ.

ಐದು ಪಂದ್ಯಗಳ ಆಶಸ್ ಸರಣಿಯ ಮೂರು ಪಂದ್ಯಗಳು ಈಗಾಗಲೇ ಮುಗಿದಿವೆ. ಅವುಗಳಲ್ಲಿ ಮೊದಲ ಪಂದ್ಯ ಡ್ರಾಗೊಂಡಿತ್ತು. ನಂತರದ ಎರಡೂ ಪಂದ್ಯಗಳನ್ನು ತಲಾ ಒಂದೊಂದರಂತೆ ಉಭಯ ತಂಡಗಳು ಗೆದ್ದಿವೆ. ಆ ಮೂಲಕ 1-1ರ ಸಮಬಲದಲ್ಲಿವೆ. ನಾಲ್ಕನೇ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲಲು ಸಾಧ್ಯವಾದರೆ, ಆಶಸ್ ಸರಣಿ ಆಂಗ್ಲರಲ್ಲಿಯೇ ಉಳಿಯಲಿದೆ.

2006-2007ರಲ್ಲಿ 5-0ಯಿಂದ ಆಶಸ್ ಸರಣಿಯನ್ನು ಗೆದ್ದು ಬೀಗಿದ್ದ ಆಸ್ಟ್ರೇಲಿಯಾ, 2009ರಲ್ಲಿ 2-1ರಿಂದ ಇಂಗ್ಲೆಂಡ್ ಎದುರು ಮುಗ್ಗರಿಸಿತ್ತು. ಪ್ರಸಕ್ತ ಅವಧಿಯಲ್ಲೂ ಅದೇ ಪುನರಾವರ್ತನೆಯಾಗುವ ಸಾಧ್ಯತೆಗಳು ಮೊದಲನೇ ದಿನವೇ ಗೋಚರವಾಗಿದೆ. ಈ ಸರಣಿಯ ಕೊನೆಯ ಹಾಗೂ ಐದನೇ ಪಂದ್ಯ ಸಿಡ್ನಿಯಲ್ಲಿ ಜನವರಿ 3ರಿಂದ 7ರವರೆಗೆ ನಡೆಯಲಿದೆ.

ಭಾನುವಾರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಆಂಡ್ರ್ಯೂ ಸ್ಟ್ರಾಸ್ ಪಡೆ ಮೇಲುಗೈಗೆ ಪ್ರಮುಖವಾಗಿ ಕಾರಣರಾದದ್ದು ಜೇಮ್ಸ್ ಆಂಡರ್ಸನ್ (44ಕ್ಕೆ ನಾಲ್ಕು ವಿಕೆಟ್) ಮತ್ತು ಕ್ರಿಸ್ ಟ್ರಿಮ್ಲೆಟ್ (26ಕ್ಕೆ ನಾಲ್ಕು ವಿಕೆಟ್).

ವಿಕೆಟ್ ಕೀಪರ್ ಮ್ಯಾಟ್ ಪ್ರಿಯರ್ ಆರು ಕ್ಯಾಚುಗಳನ್ನು ಹಿಡಿದಿದ್ದರು. ಇಲ್ಲಿ ಮತ್ತೊಂದು ಅಚ್ಚರಿಯ ವಿಚಾರವೆಂದರೆ ಕಾಂಗರೂ ಪಾಳಯದ ಎಲ್ಲಾ ಆಟಗಾರರೂ ಕ್ಯಾಚ್‌ಗೆ ಬಲಿಯಾಗಿರುವುದು.

ಶೇನ್ ವಾಟ್ಸನ್ (5), ಫಿಲಿಪ್ ಹೂಗ್ಸ್ (16), ರಿಕಿ ಪಾಂಟಿಂಗ್ (10), ಮೈಕೆಲ್ ಕ್ಲಾರ್ಕೆ (20), ಮೈಕೆಲ್ ಹಸ್ಸಿ (8), ಸ್ಟೀವನ್ ಸ್ಮಿತ್ (6), ಬ್ರಾಡ್ ಹಡ್ಡಿನ್ (5), ಮಿಚ್ಚೆಲ್ ಜಾನ್ಸನ್ (0), ಪೀಟರ್ ಸಿದ್ಲೆ (11), ಬೆನ್ ಹಿಲ್‌ಫೆನಾಸ್ (0) ಹಾಗೂ ರಿಯಾನ್ ಹ್ಯಾರಿಸ್ (ಅಜೇಯ 10) -- ಇದು ಆಸ್ಟ್ರೇಲಿಯಾ ಆಟಗಾರರು ಗಳಿಸಿದ ರನ್ನುಗಳು.

ಒಟ್ಟಾರೆ 42.5 ಓವರುಗಳಲ್ಲಿ 98 ರನ್ನುಗಳಿಗೆ ಆಸ್ಟ್ರೇಲಿಯಾವನ್ನು ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಪೆವಿಲಿಯನ್‌ಗೆ ಅಟ್ಟಿದೆ.

ನಂತರ ತಮ್ಮ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಪ್ರವಾಸಿಗರು, ವಿಕೆಟ್ ನಷ್ಟವಿಲ್ಲದೆ 157 ರನ್ ಗಳಿಸಿದ್ದಾರೆ. ಆ ಮೂಲಕ 59 ರನ್ನುಗಳ ಮುನ್ನಡೆ ಪಡೆದುಕೊಂಡಿದ್ದಾರೆ.

ನಾಯಕ ಆಂಡ್ರ್ಯೂ ಸ್ಟ್ರಾಸ್ (64) ಮತ್ತು ಅಲಸ್ಟೈರ್ ಕುಕ್ (80) ಶತಕದತ್ತ ಸಾಗುತ್ತಾ ತಂಡಕ್ಕೆ ಭದ್ರ ಬುನಾದಿ ಹಾಕುತ್ತಿದ್ದು, ಆಟವನ್ನು ನಾಳೆಗೆ ಮುಂದೂಡಿದ್ದಾರೆ.

ಈ ಮೈದಾನದಲ್ಲಿ ಕಳೆದ 133 ವರ್ಷಗಳಲ್ಲಿ ನಡೆದ 54 ಆಶಸ್ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ಗಳಿಸಿದ್ದ ಅತಿ ಕಡಿಮೆ ಮೊತ್ತವೆಂದರೆ 104. ಅದು 1877ರಲ್ಲಿನ ಪಂದ್ಯದಲ್ಲಿ, ಅದೂ ಎರಡನೇ ಇನ್ನಿಂಗ್ಸ್‌ನಲ್ಲಿ. ಇಂದು ಆ ದಾಖಲೆಯನ್ನು ಪಂಟರ್ ಪಡೆ ಮುರಿದು ಹಾಕಿ ತೀವ್ರ ಮುಖಭಂಗಕ್ಕೀಡಾಗಿದೆ.

ವೆಬ್ದುನಿಯಾವನ್ನು ಓದಿ