ಸ್ಟೈನ್ ಮತ್ತೆ ಮಾರಕ ದಾಳಿಗೆ ತತ್ತರಗೊಂಡ ಧೋನಿ ಪಡೆ

ಸೋಮವಾರ, 27 ಡಿಸೆಂಬರ್ 2010 (09:29 IST)
ತವರು ನೆಲದಲ್ಲಿನ ಸಾಧನೆಗಳನ್ನು ದಕ್ಷಿಣ ಆಫ್ರಿಕಾದ ನೆಲದಲ್ಲಿ ಪುನರಾವರ್ತಿಸುವುದು ಸುಲಭವಲ್ಲ ಎನ್ನುವುದು ಮಹೇಂದ್ರ ಧೋನಿ ಬಳಗಕ್ಕೆ ಖಾತ್ರಿಯಾಗಿದೆ. ಸತತ ಎರಡನೇ ಟೆಸ್ಟ್‌ನಲ್ಲೂ ಭಾರತ ಮೊದಲ ದಿನವೇ ನಿರಾಸೆ ಅನುಭವಿಸಿದೆ. ಡೇಲ್ ಸ್ಟೈನ್ ಬೌಲಿಂಗ್‌ಗೆ ಹಿರಿ-ಕಿರಿಯರು ನಾ ಮುಂದು, ತಾ ಮುಂದು ಎನ್ನುವಂತೆ ಪೇರಿ ಕಿತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಮೊದಲ ಪಂದ್ಯವನ್ನು ಕಳೆದುಕೊಂಡ ನಂತರ ಎರಡನೇ ಪಂದ್ಯದಲ್ಲೂ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಮಳೆರಾಯನಿಂದಾಗಿ ಆರಂಭಿಕ ದಿನವೇ ಸರ್ವಪತನ ಕಾಣುವುದು ತಪ್ಪಿದೆ. ಒಟ್ಟಾರೆ 56 ಓವರುಗಳನ್ನು ಆಡಿದ ಧೋನಿ ಪಡೆ 183ಕ್ಕೆ ಆರು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಮತ್ತೆ ಭಾರತಕ್ಕೆ ಮಾರಕವೆನಿಸಿದ್ದು ಡೇಲ್ ಸ್ಟೈನ್. ಅವರು 36 ರನ್ನುಗಳಿಗೆ ನಾಲ್ಕು ವಿಕೆಟುಗಳನ್ನು ಕಿತ್ತು ಕಿತ್ತರು. ಲೊನ್ವಾಬೊ ತ್ಸೊತ್ಸೊಬೆ 40ಕ್ಕೆ ಎರಡು ವಿಕೆಟ್ ಪಡೆದರು.

ಹೊಡೆ ಬಡಿ ದಾಂಡಿಗ ವೀರೇಂದ್ರ ಸೆಹ್ವಾಗ್ (25) ಪ್ರತಾಪ ಮೊದಲ ಇನ್ನಿಂಗ್ಸ್‌‍ನಲ್ಲಿ ನಡೆದಿಲ್ಲ. ಗಾಯಾಳು ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಮುರಳಿ ವಿಜಯ್ (19) ಕೂಡ ಅದೇ ಸಾಲಿಗೆ ಸೇರಿದರು.

ಈ ಹೊತ್ತಿನಲ್ಲಿ ಅನುಭವಿ ರಾಹುಲ್ ದ್ರಾವಿಡ್ (25) ತಂಡಕ್ಕೆ ಗೋಡೆಯಾಗಲಿದ್ದಾರೆ ಎನ್ನುವುದು ಕೂಡ ಬೇಗನೆ ಹುಸಿಯಾಯಿತು. ಕಲಾತ್ಮಕ ಆಟಗಾರ ವಿವಿಎಸ್ ಲಕ್ಷ್ಮಣ್ (38) ಇದ್ದುದರಲ್ಲಿ ಕೊಂಚ ಹೆಚ್ಚು ಪ್ರತಿರೋಧ ತೋರಿಸಿದವರು.

ಈ ನಾಲ್ವರು ಅಗ್ರ ಕ್ರಮಾಂಕದ ದಾಂಡಿಗರನ್ನು ಪೆವಿಲಿಯನ್‌ಗೆ ಕಳುಹಿಸಿದ್ದು ಸ್ಟೈನ್.

ಈ ನಡುವೆ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ (13) ಮತ್ತು ಚೇತೇಶ್ವರ ಪೂಜಾರ (19) ವಿಕೆಟ್ ಕಳೆದುಕೊಂಡರು.

ದಿನದಂತ್ಯಕ್ಕೆ ನಾಯಕ ಧೋನಿ (20*) ಮತ್ತು ಹರಭಜನ್ ಸಿಂಗ್ (15*) ಕ್ರೀಸಿನಲ್ಲಿದ್ದರು.

ಒಟ್ಟಾರೆ 56 ಓವರುಗಳನ್ನು ಆಡಿದ ಭಾರತ ಆರು ವಿಕೆಟ್ ಕಳೆದುಕೊಂಡು 183ಕ್ಕೆ ಕುಸಿದಿದೆ.

ಮಳೆಯ ಕಾರಣದಿಂದ ಮೊಟಕುಗೊಂಡ ಆಟದಿಂದ ಮೊದಲ ದಿನ ಭಾರತ ಬಚಾವ್ ಆಗಿದೆಯಾದರೂ, ಸ್ಟೈನ್ ಹಸಿವು ಇಂಗಿದಂತಿಲ್ಲ. ಅವರು ಸೋಮವಾರದ ಆಟದಲ್ಲೂ ತನ್ನ ದಾಳಿಯನ್ನು ಮುಂದುವರಿಸುವ ಸಾಧ್ಯತೆಗಳಿವೆ.

ವೆಬ್ದುನಿಯಾವನ್ನು ಓದಿ