ಹರಿಣಗಳ ಕಿವಿ ಹಿಂಡಿದ ಜಹೀರ್-ಭಜ್ಜಿ; ಭಾರತಕ್ಕೆ ಮುನ್ನಡೆ

ಸೋಮವಾರ, 27 ಡಿಸೆಂಬರ್ 2010 (18:55 IST)
ಭಾರತ-ದ. ಆಫ್ರಿಕಾ ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ...

ಯಾತಕ್ಕಾಗಿ ಭಾರತ ಟೆಸ್ಟ್ ರ‌್ಯಾಂಕಿಂಗ್‌ನಲ್ಲಿ ಅಗ್ರಪಟ್ಟದಲ್ಲಿದೆ ಎಂಬುದನ್ನು ತೋರಿಸಿಕೊಡುವ ರೀತಿಯಲ್ಲಿತ್ತು ದ್ವಿತೀಯ ದಿನದಾಟದಲ್ಲಿನ ಬೌಲರುಗಳ ಪ್ರದರ್ಶನ. ಮೊದಲ ಇನ್ನಿಂಗ್ಸ್‌ನಲ್ಲಿ 205 ರನ್ನುಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡರೂ ಅಮೋಘ ಪ್ರದರ್ಶನ ನೀಡಿರುವ ಭಾರತೀಯ ಬೌಲರುಗಳು ಹರಿಣಗಳಿಗೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಎಡಗೈ ವೇಗಿ ಜಹೀರ್ ಖಾನ್ (3 ವಿಕೆಟ್) ಮತ್ತು ಆಫ್ ಸ್ಪಿನ್ನರ್ ಹರಭಜನ್ ಸಿಂಗ್ (4 ವಿಕೆಟ್) ಮಾರಕ ದಾಳಿಗೆ ತತ್ತರಿಸಿರುವ ಆತಿಥೇಯ ಗ್ರೇಮ್ ಸ್ಮಿತ್ ಪಡೆ 131 ರನ್ನುಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿದೆ. ಆ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 74 ರನ್ನುಗಳ ಮಹತ್ವದ ಮುನ್ನಡೆ ದಾಖಲಿಸಿದೆ.

ಗಾಯದಿಂದಾಗಿ ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಎಡಗೈ ವೇಗಿ ಜಹೀರ್ ಖಾನ್ ಆರಂಭದಲ್ಲೇ ಎರಡು ವಿಕೆಟ್ ಪಡೆಯುವ ಮೂಲಕ ಆತಿಥೇಯ ತಂಡಕ್ಕೆ ಆಘಾತ ನೀಡಿದರು. ಆರಂಭಿಕರಾದ ನಾಯಕ ಗ್ರೇಮ್ ಸ್ಮಿತ್ (9) ಮತ್ತು ಆಲ್ವಿರೊ ಪೀಟರ್‌ಸನ್ (24) ಅವರನ್ನು ಬೇಗನೆ ಮರಳಿಸಿದ ಜಹೀರ್ ಪಂದ್ಯದಲ್ಲಿ ಪ್ರವಾಸಿಗರು ಹಿಡಿತ ಸಾಧಿಸುವಂತೆ ಮಾಡಿದರು.

ನಂತರ ಬಂದ ಜಾಕ್ವಾಸ್ ಕಾಲಿಸ್ (10) ರನೌಟ್ ಬಲೆಗೆ ಸಿಲುಕಿದರು. ಅದೇ ರೀತಿ ಇನ್ ಫಾರ್ಮ್ ಆಟಗಾರ ಅಬ್ರಹಾಂ ಡಿ ವಿಲಿಯರ್ಸ್ ಅವರನ್ನು ವೇಗಿ ಶ್ರೀಶಾಂತ್ ಶೂನ್ಯಕ್ಕೆ ಮರಳಿಸಿದರು. ಇದರೊಂದಿಗೆ ಊಟದ ವಿರಾಮದ ಹೊತ್ತಿಗೆ 74 ರನ್ನುಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾ ಸಂಕಷ್ಟಕ್ಕೆ ಸಿಲುಕಿತ್ತು.

ಲಂಚ್ ಬ್ರೇಕ್ ನಂತರವೂ ಭಾರತೀಯ ಬೌಲರುಗಳು ಮೆರೆದಾಟವನ್ನು ಮುಂದುವರಿಸಿದರು. ಭಾರತದ ವಿರುದ್ಧದ ಕಳೆದ ನಾಲ್ಕು ಟೆಸ್ಟ್ ಪಂದ್ಯಗಳಲ್ಲೂ ಸತತ ಶತಕಗಳ ಸಾಧನೆ ಮಾಡಿದ್ದ ಹಾಶೀಮ್ ಆಮ್ಲಾ (33) ಸ್ಪಲ್ವ ಪ್ರತಿರೋಧ ನೀಡಿದರೂ ಅವರ ಓಟಕ್ಕೆ ಭಜ್ಜಿ ಬ್ರೇಕ್ ಹಾಕಿದರು. ಆಶ್ವೆಲ್ ಪ್ರಿನ್ಸ್ (13) ಜಹೀರ್‌ಗೆ ತುತ್ತಾದರೆ ಡೇಲ್ ಸ್ಟೈನ್ (1), ಪಾಲ್ ಹ್ಯಾರಿಸ್ (0), ಮೊರ್ನೆ ಮೊರ್ಕೆಲ್ (10) ಮತ್ತು ತ್ಸೊತ್ಸೊಬೆರನ್ನು (0) ಭಜ್ಜಿ ಬಲಿ ತೆಗೆದುಕೊಂಡರು.

ಇದರೊಂದಿಗೆ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸನ್ನು 37.2 ಓವರುಗಳಲ್ಲಿ 131 ರನ್ನುಗಳಿಗೆ ಕೊನೆಗೊಳಿಸಿತು. ಇದು ಕಳೆದ ಪಂದ್ಯದಲ್ಲಿ ಭಾರತ ದಾಖಲಿಸಿದ್ದ ಮೊತ್ತಕ್ಕಿಂತಲೂ ಕಡಿಮೆ ಸ್ಕೋರ್ ಆಗಿದೆ. ಸೆಂಚುರಿಯನ್‌ನಲ್ಲಿ ಭಾರತ 38.4 ಓರುಗಳಲ್ಲಿ 136 ರನ್ನುಗಳಿಗೆ ಆಲೌಟಾಗಿತ್ತು.

ಮಾರಕ ದಾಳಿ ಸಂಘಟಿಸಿದ ಭಜ್ಜಿ ಕೇವಲ 10 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರೆ ಜಹೀರ್ 36ಕ್ಕೆ ಮೂರು ವಿಕೆಟ್ ಉರುಳಿಸಿದರು. ಉಳಿದೆರಡು ವಿಕೆಟುಗಳನ್ನು ಶ್ರೀಶಾಂತ್ ಮತ್ತು ಇಶಾಂತ್ ಹಂಚಿಕೊಂಡರು.

ದ್ರಾವಿಡ್‌ಗೆ ಕ್ಯಾಚುಗಳ ದ್ವಿಶತಕ...
ಅದೇ ಹೊತ್ತಿಗೆ ಸ್ಲಿಪ್‌ನಲ್ಲಿ ಡೇಲ್ ಸ್ಟೈನ್ ಅದ್ಭುತ ಕ್ಯಾಚ್ ಪಡೆದ ರಾಹುಲ್ ದ್ರಾವಿಡ್ ಟೆಸ್ಟ್‌ನಲ್ಲಿ 200 ಕ್ಯಾಚ್ ಪಡೆದ ವಿಶ್ವದ ಮೊದಲ ಫೀಲ್ಡರ್ ಎನಿಸಿಕೊಂಡರು. ತನ್ನ 149 ಟೆಸ್ಟ್ ಪಂದ್ಯದಲ್ಲಿ ದ್ರಾವಿಡ್ ಈ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ.

ಡರ್ಬನ್‌ನಲ್ಲಿ ಸ್ಟೈನ್ ದರ್ಬಾರ್...
ಇದಕ್ಕೂ ಮೊದಲು ವಿಶ್ವ ನಂ.1 ಟೆಸ್ಟ್ ಬೌಲರ್ ಡೇಲ್ ಸ್ಟೈನ್ (50ಕ್ಕೆ 6 ವಿಕೆಟ್) ಮಾರಕ ದಾಳಿಗೆ ತತ್ತರಿಸಿದ ಭಾರತ ತನ್ನ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 205 ರನ್ನುಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತ್ತು.

ಇದರೊಂದಿಗೆ ದಕ್ಷಿಣ ಆಫ್ರಿಕಾ ವೇಗಿ ಪಿಚ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯವನ್ನು ಮುಂದುವರಿಸಿತು. 183/6 ಎಂಬಲ್ಲಿದ್ದ ದ್ವಿತೀಯ ದಿನದಾಟ ಮುಂದುವರಿಸಿದ್ದ ಭಾರತ ಕನಿಷ್ಠ 250ರನ್ ಪೇರಿಸಬಹುದೆಂದು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು.

ಆದರೆ ಭಾರತೀಯ ಯೋಜನೆಗಳನ್ನು ಮತ್ತೆ ಬಡುಮೇಲು ಮಾಡಿದ ಸ್ಟೈನ್ ಆರು ವಿಕೆಟ್ ಕಿತ್ತುವ ಮೂಲಕ ಮಿಂಚಿನ ಬೌಲಿಂಗ್ ಸಂಘಟಿಸಿದರು. ಇಂದಿನ ದಿನದಾಟದಲ್ಲಿ ಭಾರತ ತನ್ನ ಕೊನೆಯ ನಾಲ್ಕು ವಿಕೆಟುಗಳನ್ನು ಕೇವಲ 22 ರನ್ ಅಂತರದಲ್ಲಿ ಕಳೆದುಕೊಂಡಿತ್ತು. ಸ್ಟೈನ್‌ಗೆ ಉತ್ತಮ ಸಾಥ್ ನೀಡಿದ ಮೊರ್ನೆ ಮೊರ್ಕೆಲ್ ಎರಡು ವಿಕೆಟ್ ಕಿತ್ತರು.

ಸ್ವಲ್ಪ ಹೊತ್ತು ಕ್ರೀಸಿನಲ್ಲಿ ನೆಲೆಯೂರಿ ನಿಂತ ನಾಯಕ ಮಹೇಂದ್ರ ಸಿಂಗ್ ಧೋನಿ 35 ರನ್ ಗಳಿಸಿದರು. ಉಳಿದಂತೆ ಹರಭಜನ್ ಸಿಂಗ್ (21), ಜಹೀರ್ ಖಾನ್ ಮತ್ತು ಎಸ್. ಶ್ರೀಶಾಂತ್ ಶೂನ್ಯ ಸಂಪಾದಿಸಿ ಮರಳಿದರು. ಇಶಾಂತ್ ಶರ್ಮಾ 1 ರನ್ ಗಳಿಸಿ ಅಜೇರಾಗುಳಿದರು.

ಡರ್ಬನ್ ಟೆಸ್ಟ್; ಮೊದಲ ದಿನದಾಟದ ವಿವರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ