ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಲ್ಲಿ ಪಾರುಪತ್ಯ ಮೆರೆದಿರುವ ಭಾರತಕ್ಕೆ ಈ ಪಂದ್ಯ ಗೆಲ್ಲುವ ಅತ್ಯುತ್ತಮ ಅವಕಾಶವಿದೆ ಎಂದು ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ದಿನದಾಟದಲ್ಲಿ ಒಟ್ಟು 18 ವಿಕೆಟುಗಳು ಪತನವಾಗಿದ್ದವು. ಒಟ್ಟು 166 ರನ್ನುಗಳ ಮುನ್ನಡೆ ದಾಖಲಿಸಿರುವ ಭಾರತದ ಕೈಯಲ್ಲಿ ಇನ್ನೂ ಆರು ವಿಕೆಟ್ ಬಾಕಿ ಉಳಿದಿದೆ. ತಂಡವು 300ರ ಗಡಿ ದಾಟಿದಲ್ಲಿ ಪಂದ್ಯ ಗೆಲ್ಲುವ ಶ್ರೇಷ್ಠ ಅವಕಾಶವಿದೆ ಎಂದು ಭಜ್ಜಿ ವಿವರಿಸಿದರು.
ಮೂರನೇ ದಿನದಾಟ ಅತಿ ಮಹತ್ವದ್ದು. ಇದು ಸರಣಿ ಸಮಬಲಗೊಳಿಸುವ ದಿನವಾಗಿರಲಿದೆ. ನಾವು ನಮ್ಮ ಸಾಮರ್ಥ್ಯದಲ್ಲಿ ಭರವಸೆಯನ್ನಿಟ್ಟುಕೊಳ್ಳಬೇಕು. ಆ ಮೂಲಕ ಉತ್ತಮ ಮೊತ್ತ ಪೇರಿಸಬೇಕು ಎಂದಿದ್ದಾರೆ.
ಲಕ್ಷ್ಮಣ್ ಮತ್ತು ಪೂಜಾರ ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲುವ ಭರವಸೆಯಿದೆ. ಆ ಮೂಲಕ ಸ್ಕೋರ್ ಬೋರ್ಡ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕಬಹುದು. ಮೊದಲ ಅವಧಿಯಲ್ಲಿ ನಾವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರೆ ಖಂಡಿತವಾಗಿಯೂ ಪಂದ್ಯ ನಮ್ಮ ಪಾಲಾಗಲಿದೆ ಎಂದವರು ಹೇಳಿದರು.
ಹರಭಜನ್ ಸಿಂಗ್ ಮತ್ತು ಜಹೀರ್ ಖಾನ್ ಮಾರಕ ದಾಳಿಗೆ ಕುಸಿದಿದ್ದ ದಕ್ಷಿಣ ಆಫ್ರಿಕಾ 131 ರನ್ನುಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತ್ತು. ಜಹೀರ್ ಅನುಭವಿ ಬೌಲರ್. ಅವರು ಅತ್ಯುತ್ತಮ ದಾಳಿ ಸಂಘಟಿಸುವುದರೊಂದಿಗೆ ಇತರ ಬೌಲರುಗಳಿಗೂ ಪ್ರೇರಣೆಯಾಗುತ್ತಾರೆ ಎಂದು ಹರಭಜನ್ ತಿಳಿಸಿದರು.
ಇದೇ ಸಂದರ್ಭದಲ್ಲಿ ಕ್ಯಾಚುಗಳ ದ್ವಿಶತಕ ಸಾಧನೆ ಮಾಡಿರುವ ರಾಹುಲ್ ದ್ರಾವಿಡ್ ಅವರಿಗೆ ಭಜ್ಜಿ ಅಭಿನಂದನೆ ಸಲ್ಲಿಸಿದರು. ಅದ್ಭುತ್ ಕ್ಯಾಚ್ ಪಡೆಯುವ ಮೂಲಕ ದ್ರಾವಿಡ್ ಕ್ಯಾಚುಗಳ ದ್ವಿಶತಕ ಸಾಧನೆ ಮಾಡಿದರು. ಅಷ್ಟೇ ಅಲ್ಲದೆ ದ್ರಾವಿಡ್ ನೆರವಿನೊಂದಿಗೆ ಭಜ್ಜಿ 50 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಅಟ್ಟಿದ ಸಾಧನೆ ಮಾಡಿದರು.
ಹಾಗೆಯೇ ಯುವ ಆಟಗಾರ ಚೇತೇಶ್ವರ ಪೂಜಾರ ಅವರ ಬಗ್ಗೆಯೂ ಭಜ್ಜಿ ಹೊಗಳಿಕೆಯ ಮಾತುಗಳನ್ನಾಡಿದರು. ಪೂಜಾರ ಪ್ರತಿಭಾವಂತ ಆಟಗಾರ. ಅಭ್ಯಾಸದ ಅವಧಿಯಲ್ಲಿ ಕಠಿಣ ತಾಲೀಮು ನಡೆಸುತ್ತಾರೆ. ಅವರೀಗ ದೇಶಿಯ ದರ್ಜೆಯ ಶತಕಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೂ ವರ್ಗಾಯಿಸಬೇಕಾಗಿದೆ ಎಂದವರು ಹೇಳಿದರು.