ಸೋಲಿನ ಸುಳಿಯಲ್ಲಿ ಆಸೀಸ್; ಇನ್ನಿಂಗ್ಸ್ ಗೆಲುವಿನತ್ತ ಆಂಗ್ಲರು

ಮಂಗಳವಾರ, 28 ಡಿಸೆಂಬರ್ 2010 (15:39 IST)
ಪ್ರತಿಷ್ಠಿತ ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ ಗೆಲುವಿನತ್ತ ಇಂಗ್ಲೆಂಡ್ ಮುನ್ನಡೆದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 415 ರನ್ನುಗಳ ಹಿನ್ನೆಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ್ದ ಆಸೀಸ್ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮೂರನೇ ದಿನದಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 169 ರನ್ ಗಳಿಸಿದ್ದು, ಇನ್ನಿಂಗ್ಸ್‌ ಸೋಲಿನತ್ತ ಮುಖ ಮಾಡಿದೆ.

ಇನ್ನಿಂಗ್ಸ್ ಸೋಲಿನಿಂದ ಪಾರಾಗಲು ಆಸೀಸ್‌ಗಿನ್ನು ನಾಲ್ಕು ವಿಕೆಟ್ ಬಾಕಿ ಉಳಿದಿರುವಂತೆಯೇ 246 ರನ್ ಗಳಿಸಬೇಕಾದ ಅಗತ್ಯವಿದೆ. ಮತ್ತೊಂದೆಡೆ ಆಂಗ್ಲ ಪಡೆ ಐದು ಪಂದ್ಯಗಳ ಸರಣಿಯಲ್ಲಿ 2-1ರ ಸ್ಪಷ್ಟ ಮುನ್ನಡೆ ದಾಖಲಿಸುವತ್ತ ಮುನ್ನಡೆದಿದೆ.

ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ತಂಡವನ್ನು 98 ರನ್ನುಗಳಿಗೆ ನಿಯಂತ್ರಿಸಿದ್ದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 513 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ಅಜೇಯ ಶತಕ ಬಾರಿಸಿದ್ದ ಜಾನಥನ್ ಟ್ರಾಟ್ (168*) ಅಮೋಘ ಇನ್ನಿಂಗ್ಸ್ ಕಟ್ಟುವ ಮೂಲಕ ಆತಿಥೇಯರಿಗೆ ಸೆಡ್ಡು ನೀಡಿದ್ದರು. ಅದೇ ರೀತಿ ಮಾಟ್ ಪ್ರಯರ್ 85 ರನ್ನುಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ್ದರು.

ನಂತರ ತೀವ್ರ ಒತ್ತಡದಲ್ಲಿದ್ದ ಆಸೀಸ್ ಮತ್ತೊಮ್ಮೆ ಬ್ಯಾಟಿಂಗ್ ಕುಸಿತ ಅನುಭವಿಸಿತ್ತು. ಆರಂಭಿಕ ಶೇನ್ ವಾಟ್ಸನ್ ಶತಕಾರ್ಧ (54) ಗಳಿಸಿದ ಹೊರತಾಗಿಯೂ ಇತರೆಲ್ಲಾ ಬ್ಯಾಟ್ಸ್‌ಮನ್‌ಗಳು ವೈಫಲ್ಯತೆಯನ್ನು ಕಂಡರು. ನಾಯಕ ರಿಕಿ ಪಾಂಟಿಂಗ್ (20) ಮತ್ತೊಮ್ಮೆ ವಿಫಲರಾದರು. ಮೈಕಲ್ ಹಸ್ಸಿ (0) ಮತ್ತು ಮೈಕಲ್ ಕ್ಲಾರ್ಕ್‌ರಂತಹ (13) ಬ್ಯಾಟಿಂಗ್ ದಿಗ್ಗಜರೂ ಛಾಪು ಮೂಡಿಸುವಲ್ಲಿ ವಿಫಲರಾದರು. ಇಂಗ್ಲೆಂಡ್ ಪರ ಮೂರು ವಿಕೆಟ್ ಕಿತ್ತ ಟಿಮ್ ಬ್ರೆಸ್ಮನ್ ಯಶಸ್ವಿ ಬೌಲರ್ ಎನಿಸಿಕೊಂಡರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ