ಐತಿಹಾಸಿಕ ಸರಣಿ ಗೆಲುವಿಗಿನ್ನು ಒಂದೇ ಹೆಜ್ಜೆ ದೂರ..!

ಶುಕ್ರವಾರ, 31 ಡಿಸೆಂಬರ್ 2010 (18:38 IST)
ಕೇಪ್‌ಟೌನ್: ದಕ್ಷಿಣ ಆಫ್ರಿಕಾ ನೆಲದಲ್ಲಿ ತನ್ನ ಚೊಚ್ಚಲ ಟೆಸ್ಟ್ ಸರಣಿ ಜಯವನ್ನು ಎದುರು ನೋಡುತ್ತಿರುವ ಟೀಮ್ ಇಂಡಿಯಾ ಪೂರ್ಣ ಆತ್ಮವಿಶ್ವಾಸದೊಂದಿಗೆ ಇಲ್ಲಿ ಜನವರಿ 2, ಭಾನುವಾರ ಆರಂಭವಾಗಲಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಕೇಪ್‌ಟೌನ್‌ನಲ್ಲಿ ನಡೆಯಲಿರುವ ನಿರ್ಣಾಯಕ ಟೆಸ್ಟ್‌ನಲ್ಲಿ ಗೆಲುವು ದಾಖಲಿಸುವ ಮೂಲಕ ಐತಿಹಾಸಿಕ ಸರಣಿ ಗೆಲುವನ್ನು ಮಹೇಂದ್ರ ಸಿಂಗ್ ಧೋನಿ ಬಳಗ ಎದುರು ನೋಡುತ್ತಿದೆ. ಒಂದು ವೇಳೆ ಇಲ್ಲಿ ಐತಿಹಾಸಿಕ ಸರಣಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದಲ್ಲಿ ಅದು 2011ರ ಹೊಸವರ್ಷಕ್ಕೆ ದೇಶದ ಕ್ರೀಡಾಭಿಮಾನಿಗಳಿಗೆ ಮಹೇಂದ್ರ ಸಿಂಗ್ ಧೋನಿ ಬಳಗ ನೀಡಲಿರುವ ಶ್ರೇಷ್ಠ ಉಡುಗೊರೆಯಾಗಲಿದೆ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

PTI
ಇಡೀ ವಿಶ್ವವೇ ಎದುರು ನೋಡುತ್ತಿರುವ ವಿಶ್ವದ ಅಗ್ರ ತಂಡಗಳ ನಡುವಣ ಹೋರಾಟವು ಇದೀಗ ಕುತೂಹಲ ಹಂತ ತಲುಪಿದೆ. ಸೆಂಚುರಿಯನ್‌ನಲ್ಲಿ ನಡೆದ ಮೊದಲ ಪಂದ್ಯವನ್ನು ಆತಿಥೇಯ ಗ್ರೇಮ್ ಸ್ಮಿತ್ ಪಡೆ ಇನ್ನಿಂಗ್ಸ್ ಹಾಗೂ 25 ರನ್ ವಶಪಡಿಸಿಕೊಂಡಿದ್ದರೆ ಡರ್ಬನ್‌ನಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯವನ್ನು 87 ರನ್ನುಗಳಿಂದ ಗೆದ್ದುಕೊಂಡಿದ್ದ ಭಾರತ ತಿರುಗೇಟು ನೀಡಿತ್ತು.

ಇತಿಹಾಸದತ್ತ ಮೆಲುಕು ಹಾಕಿದಾಗ ದಕ್ಷಿಣ ಆಫ್ರಿಕಾದಲ್ಲಿನ ಭಾರತದ ದಾಖಲೆಗಳು ತೀರಾ ಕಳಪೆಯಾಗಿದೆ. ಈ ಸರಣಿಗೂ ಮುನ್ನ ಆಡಿದ 12 ಟೆಸ್ಟ್‌ನಲ್ಲಿ ಕೇವಲ ಒಂದರಲ್ಲಷ್ಟೇ ಗೆಲುವು ದಾಖಲಿಸಲು ಯಶಸ್ವಿಯಾಗಿದೆ. ಇದು 2006ರ ಪ್ರವಾಸದಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಾಖಲಾಗಿತ್ತು.

ಆದರೆ ಕಳೆದ ಡರ್ಬನ್ ಟೆಸ್ಟ್‌ನಲ್ಲಿ ಮತ್ತೊಂದು ಐತಿಹಾಸಿಕ ಜಯ ದಾಖಲಿಸಿದ್ದ ಭಾರತ ವಿಶ್ವ ನಂ.1 ಪಟ್ಟಕ್ಕೆ ನಾವೇ ಅರ್ಹರು ಎಂಬುದನ್ನು ಸಾಬೀತುಪಡಿಸಿತ್ತು. ಇದೀಗ ಕೇಪ್‌ಟೌನ್‌ನ ನಿರ್ಣಾಯಕ ಪಂದ್ಯದಲ್ಲೂ ಇದೇ ಗೆಲುವಿನ ಸ್ಫೂರ್ತಿಯಲ್ಲಿ ಐತಿಹಾಸಿಕ ಸರಣಿ ಗೆಲುವು ದಾಖಲಿಸುವ ನಿರೀಕ್ಷೆಯನ್ನಿಟ್ಟುಕೊಂಡಿದೆ.

ಎರಡೂ ಪಂದ್ಯಗಳಲ್ಲೂ ಕೆಲವು ವೈಯಕ್ತಿಕ ಪ್ರದರ್ಶನವನ್ನು ಹೊರತುಪಡಿಸಿದರೆ ಭಾರತ ಬ್ಯಾಟಿಂಗ್ ವಿಭಾಗ ಸಂಪೂರ್ಣ ವೈಫಲ್ಯ ಕಂಡಿತ್ತು. ಭಾರತ ಬ್ಯಾಟಿಂಗ್ ವಿಭಾಗವನ್ನೇ ನೆಚ್ಚಿಕೊಂಡಿದೆ. ಹೀಗಾಗಿ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿವಿಎಸ್ ಲಕ್ಷ್ಮಣ್ ಅವರಿಂದ ಕಳಪೆ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿಸುವಂತಿಲ್ಲ. ವಿಶ್ವದ ಯಾವುದೇ ರೀತಿಯ ಪಿಚ್ ಆದರೂ ಈ ಬ್ಯಾಟ್ಸ್‌ಮನ್‌ಗಳು ಶ್ರೇಷ್ಠ ಪ್ರದರ್ಶನ ನೀಡಬಲ್ಲರು.

ಹಾಗೆಯೇ ಗಾಯದಿಂದ ಚೇತರಿಸಿಕೊಂಡಿರುವ ಗೌತಮ್ ಗಂಭೀರ್ ಈ ಪಂದ್ಯಕ್ಕೆ ಲಭ್ಯರಾಗುವ ವಿಶ್ವಾಸವಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ದ್ವಿತೀಯ ಟೆಸ್ಟ್‌ನಲ್ಲಿ ಪರಿಣಾಮಕಾರಿ ಎನಿಸಿಕೊಳ್ಳುವಲ್ಲಿ ವಿಫಲರಾಗಿದ್ದ ಚೇತೇಶ್ವರ ಪೂಜಾರ ಕೂಡಾ ಮತ್ತೊಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದಾರೆ.

ಡರ್ಬನ್ ಮೈದಾನದಲ್ಲಿ ದರ್ಬಾರ್ ನಡೆಸಿದ್ದ ತ್ರಿವಳಿ ವೇಗಿಗಳು (ಜಹೀರ್-ಶ್ರೀಶಾಂತ್-ಇಶಾಂತ್) ಮತ್ತೊಮ್ಮೆ ಬಲಾಢ್ಯ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಲೈನ್-ಅಪ್‌ಗೆ ಸೆಡ್ಡು ನೀಡುವ ಭರವಸೆಯಲ್ಲಿದ್ದಾರೆ. ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಕೂಡಾ ಕೈಚಳಕ ತೋರುವ ವಿಶ್ವಾಸದಲ್ಲಿದ್ದಾರೆ.

ಮತ್ತೊಂದೆಡೆ ತವರಿನಲ್ಲಿ ಪರಿಸ್ಥಿತಿಯಲ್ಲಿ ಯಾವತ್ತೂ ಪ್ರಬಲರಾಗಿರುವ ಗ್ರೇಮ್ ಸ್ಮಿತ್ ಬಳಗ ಸರಣಿಯಲ್ಲಿ ತಿರುಗಿ ಬೀಳುವ ತಾಕತ್ತನ್ನು ಹೊಂದಿದೆ. ನಾಯಕ ಹೊರತುಪಡಿಸಿ ಹಾಶೀಮ್ ಆಮ್ಲಾ, ಜಾಕ್ವಾಸ್ ಕಾಲಿಸ್ ಮತ್ತು ಅಬ್ರಹಾಂ ಡಿ ವಿಲಿಯರ್ಸ್‌ರಂತಹ ಶ್ರೇಷ್ಠ ದಾಂಡಿಗರನ್ನೇ ತಂಡ ಹೊಂದಿದೆ.

ಅದೇ ರೀತಿ ವೇಗಿ ಡೇಲ್ ಸ್ಟೈನ್ ಅಪಾಯಕಾರಿ ಬೌಲರ್ ಎನಿಸಿದ್ದಾರೆ. ಅಲ್ಲಿನ ಬೌನ್ಸಿ ಪಿಚ್‌ಗಳನ್ನು ಪೂರ್ಣ ಲಾಭ ಪಡೆಯಬಲ್ಲರು. ಇವರಿಗೆ ಮೊರ್ನೆ ಮೊರ್ಕೆಲ್ ಮತ್ತು ತ್ಸೊತ್ಸೊಬೆ ಕೂಡಾ ನೆರವಾಗಬಲ್ಲರು.

ಒಟ್ಟಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮೆಟ್ಟಿ ನಿಲ್ಲಲು ಭಾರತ ಎಲ್ಲ ವಿಭಾಗದಲ್ಲಿಯೂ ಸಂಘಟಿತ ಹೋರಾಟ ಪ್ರದರ್ಶಿಸಬೇಕಾಗಿರುವುದು ಅಗತ್ಯವೆನಿಸಿದೆ.

ತಂಡ ಇಂತಿದೆ:

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ), ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಚೇತೇಶ್ವರ ಪೂಜಾರಾ, ಹರಭಜನ್ ಸಿಂಗ್, ಜಹೀರ್ ಖಾನ್, ಇಶಾಂತ್ ಶರ್ಮಾ, ಎಸ್. ಶ್ರೀಶಾಂತ್, ಸುರೇಶ್ ರೈನಾ, ಮುರಳಿ ವಿಜಯ್, ವೃದ್ದೀಮಾನ್ ಸಹಾ, ಉಮೇಶ್ ಯಾದವ್, ಜೈದೇವ್ ಉನದ್ಕತ್ ಮತ್ತು ಪ್ರಗ್ಯಾನ್ ಓಜಾ.

ದಕ್ಷಿಣ ಆಫ್ರಿಕಾ: ಗ್ರೇಮ್ ಸ್ಮಿತ್ (ನಾಯಕ), ಅಲ್ವಿರೊ ಪೀಟರ್‌ಸನ್, ಹಾಶೀಮ್ ಆಮ್ಲಾ, ಜಾಕ್ವಾಸ್ ಕಾಲಿಸ್, ಅಬ್ರಹಾಂ ಡಿ ವಿಲಿಯರ್ಸ್, ಆಶ್ವೆಲ್ ಪ್ರಿನ್ಸ್, ಮಾರ್ಕ್ ಬೌಷರ್, ಡೇಲ್ ಸ್ಟೈನ್, ಪಾಲ್ ಹಾರಿಸ್, ಮೊರ್ನೆ ಮೊರ್ಕೆಲ್ ಮತ್ತು ಲಾನ್ವೆಂಬೊ ತ್ಸೊತ್ಸೊಬೆ ಮತ್ತು ರೈನ್ ಮೆಕ್‌ಲಾರೆನ್.

ವೆಬ್ದುನಿಯಾವನ್ನು ಓದಿ