ಕುಸಿದ ದಕ್ಷಿಣ ಆಫ್ರಿಕಾಕ್ಕೆ ಕಾಲಿಸ್ ಆಸರೆ

ಸೋಮವಾರ, 3 ಜನವರಿ 2011 (10:55 IST)
ಇಲ್ಲಿ ಆರಂಭವಾದ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಭಾರತದ ಮೇಲುಗೈಗೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್ ಜಾಕ್ವಾಸ್ ಕಾಲಿಸ್ (81*) ಮತ್ತೊಮ್ಮೆ ಅಡ್ಡಗಾಲು ಹಾಕಿದ್ದಾರೆ. ಮಳೆ ಅಡ್ಡಿಪಡಿಸಿದ ಮೊದಲ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡ 74 ಓವರುಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 232 ರನ್ ಗಳಿಸಿದ್ದು, ಉತ್ತಮ ಸ್ಥಿತಿಯಲ್ಲಿದೆ.

ಮೊದಲ ಟೆಸ್ಟ್‌ನಲ್ಲೂ ಚೊಚ್ಚಲ ದ್ವಿಶತಕ ಬಾರಿಸುವ ಮೂಲಕ ಹರಿಣಗಳಿಗೆ ನೆರವಾಗಿದ್ದ ಕಾಲಿಸ್ ಮತ್ತೊಮ್ಮೆ ಪ್ರವಾಸಿಗರಿಗೆ ಓಟಕ್ಕೆ ಬ್ರೇಕ್ ಹಾಕಿದರು. ಆರಂಭದಲ್ಲಿ ಗ್ರೇಮ್ ಸ್ಮಿತ್ (6) ವಿಕೆಟ್ ಕಳೆದುಕೊಂಡಿದ್ದ ಆತಿಥೇಯ ತಂಡ ಸಂಕಷ್ಟಕ್ಕೆ ಒಳಗಾಗಿತ್ತು. ಮತ್ತೊಮ್ಮೆ ಸ್ಮಿತ್‌ರನ್ನು ಪೆವಿಲಿಯನ್‌ಗೆ ಅಟ್ಟಲು ಯಶಸ್ವಿಯಾಗಿದ್ದ ಜಹೀರ್ ಖಾನ್ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಆಲ್ವಿರೊ ಪೀಟರ್‌ಸನ್ (21) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಆದರೆ ಹಾಶೀಮ್ ಆಮ್ಲಾ ಮತ್ತೊಂದು ಶತಕಾರ್ಧ (59) ಬಾರಿಸುವ ಮೂಲಕ ಭಾರತದ ವಿರುದ್ಧ ತಮ್ಮ ಅಮೋಘ ಫಾರ್ಮ್ ಮುಂದುವರಿಸಿದರು. ಆದರೆ ಆಮ್ಲಾ ಮತ್ತು ಅಬ್ರಹಾಂ ಡಿ ವಿಲಿಯರ್ಸ್‌ರನ್ನು (26) ಪೆವಿಲಿಯನ್‌ಗೆ ಅಟ್ಟಿದ ಶ್ರೀಶಾಂತ್ ಮತ್ತೊಮ್ಮೆ ಪಂದ್ಯದಲ್ಲಿ ತಿರುಗಿ ಬೀಳಲು ನೆರವಾದರು.

ಹೀಗಿದ್ದರೂ ಮತ್ತೊಂದು ಬದಿಯಿಂದ ಬಂಡೆಕಲ್ಲಿನಂತೆ ನಿಂತ ಕಾಲಿಸ್ ಭಾರತೀಯರಿಗೆ ಸವಾಲಾಗಿ ಪರಿಣಮಿಸಿದರು. 169 ಎಸೆತಗಳನ್ನು ಎದುರಿಸಿರುವ ಕಾಲಿಸ್ ಆರು ಬೌಂಡರಿಗಳ ನೆರವಿನಿಂದ 81 ರನ್ ಗಳಿಸಿದ್ದು, ಶತಕದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಕಾಲಿಸ್‌ಗೆ ಉತ್ತಮ ಬೆಂಬಲ ನೀಡುತ್ತಿರುವ ಆಶ್ವೆಲ್ ಪ್ರಿನ್ಸ್ (28*) ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ ಪರ ಶ್ರೀಶಾಂತ್ ಎರಡು ಹಾಗೂ ಜಹೀರ್ ಮತ್ತು ಇಶಾಂತ್ ತಲಾ ಒಂದು ವಿಕೆಟ್ ಕಿತ್ತರು. ಆದರೆ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಮೊದಲ ದಿನದಾಟದಲ್ಲಿ ವಿಕೆಟ್ ಕಬಳಿಸುವಲ್ಲಿ ವಿಫಲರಾಗಿದ್ದಾರೆ.

ಒಂದು ವೇಳೆ ಈ ಪಂದ್ಯ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದಲ್ಲಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತ ಐತಿಹಾಸಿಕ ಸರಣಿ ಜಯ ದಾಖಲಿಸಲಿದೆ.

ವೆಬ್ದುನಿಯಾವನ್ನು ಓದಿ