ಸ್ಟ್ರಾಸ್, ಕುಕ್ ಶತಕಾರ್ಧ; ಉತ್ತಮ ಸ್ಥಿತಿಯಲ್ಲಿ ಇಂಗ್ಲೆಂಡ್

ಮಂಗಳವಾರ, 4 ಜನವರಿ 2011 (17:59 IST)
ಆಸ್ಟ್ರೇಲಿಯಾದ 280 ರನ್ನುಗಳಿಗೆ ಉತ್ತರವಾಗಿ ಉತ್ತಮ ಆರಂಭ ಪಡೆದುಕೊಂಡಿರುವ ಪ್ರವಾಸಿ ಇಂಗ್ಲೆಂಡ್ ತಂಡವು ಇಲ್ಲಿ ನಡೆಯುತ್ತಿರುವ ಆಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನದಂತ್ಯಕ್ಕೆ 48 ಓವರುಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 167 ರನ್ ಗಳಿಸಿದ್ದು, ಉತ್ತಮ ಸ್ಥಿತಿಯಲ್ಲಿದೆ.

ಏಳು ವಿಕೆಟ್ ಬಾಕಿ ಉಳಿದಿರುವಂತೆಯೇ ಆಂಗ್ಲ ಪಡೆ ಇದೀಗ 113 ರನ್ನುಗಳ ಹಿನ್ನೆಡೆಯಲ್ಲಿದೆ. ಹೀಗಾಗಿ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ದಾಖಲಿಸುವುದು ಬಹುತೇಕ ಖಚಿತವಾಗಿದೆ.

ಆಕರ್ಷಕ ಅರ್ಧಶತಕಗಳನ್ನು ಬಾರಿಸಿರುವ ನಾಯಕ ಆಂಡ್ರ್ಯೂ ಸ್ಟ್ರಾಸ್ ಮತ್ತು ಆಲಿಸ್ಟಾರ್ ಕುಕ್ ಮತ್ತೊಮ್ಮೆ ತಂಡಕ್ಕೆ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 98 ರನ್ನುಗಳ ಜತೆಯಾಟ ನೀಡಿದರು. ಆದರೆ 60 ರನ್ ಗಳಿಸಿದ ಸ್ಟ್ರಾಸ್ ವೇಗಿ ಹಿಲ್ಪನಾಸ್ ಎಸೆತದಲ್ಲಿ ಕ್ಲೀನ್‌ಬೌಲ್ಡ್ ಆದರು.

ನಂತರ ಬಂದ ಜೊನಾಥನ್ ಟ್ರಾಟ್ ಶೂನ್ಯ ಸಂಪಾದಿಸಿ ಮರಳಿದರು. ಕೆಲವೊಂದು ಆಕರ್ಷಕ ಶಾಟ್ ಬಾರಿಸಿದ ಕೆವಿನ್ ಪೀಟರ್‌ಸನ್ (36) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಸರಣಿಯುದ್ದಕ್ಕೂ ತಮ್ಮ ಅಮೋಘ ಫಾರ್ಮ್ ಮುಂದುವರಿಸಿರುವ ಆಲಿಸ್ಟಾರ್ ಕುಕ್ 61 ರನ್ ಗಳಿಸಿ ಅಜೇರಾಗುಳಿದಿದ್ದು, ತೃತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಗೆ ನೈಟ್ ವಾಚ್‌ಮ್ಯಾನ್ ಜೇಮ್ಸ್ ಆಂಡ್ರೆಸನ್ (1*) ಸಾಥ್ ನೀಡುತ್ತಿದ್ದಾರೆ.

ಇದಕ್ಕೂ ಮೊದಲು 134/4 ಎಂಬಲ್ಲಿದ್ದ ಬ್ಯಾಟಿಂಗ್ ಮುಂದುವರಿಸಿದ್ದ ಆಸೀಸ್ 280 ರನ್ನುಗಳಿಗೆ ತನ್ನೆಲ್ಲಾ ವಿಕೆಟುಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ 189ಕ್ಕೆ ಎಂಟು ವಿಕೆಟ್ ಕಳೆದುಕೊಂಡಿದ್ದ ಕ್ಲಾರ್ಕ್ ಪಡೆ ಮತ್ತೊಮ್ಮೆ ಸಾಧಾರಣ ಮೊತ್ತಕ್ಕೆ ಮುಗ್ಗರಿಸಲಿದೆಯೆಂಬ ಅನುಮಾನ ಮೂಡಿತ್ತು. ಆದರೆ ಬಿರುಸಿನ ಅರ್ಧಶತಕ ಬಾರಿಸಿದ ಮಿಚ್ಚೆಲ್ ಜಾನ್ಸನ್ ತಂಡಕ್ಕೆ ನೆರವಾದರು.

ಹಿಲ್ಪನಾಸ್ ಜತೆ ಸೇರಿ ಒಂಬತ್ತನೇ ವಿಕೆಟ್‌ಗೆ 76 ರನ್ನುಗಳ ಜತೆಯಾಟ ನೀಡಿದ ಜಾನ್ಸನ್ 53 ರನ್ ಗಳಿಸಿ ಔಟಾದರು. ಅವರ ಈ ಇನ್ನಿಂಗ್ಸ್‌ನಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಹಾಗೆಯೇ 34 ರನ್ ಗಳಿಸಿದ ಹಿಲ್ಪನಾಸ್ ಕೂಡಾ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಇಂಗ್ಲೆಂಡ್ ಪರ ಆಂಡ್ರೆಸನ್ ನಾಲ್ಕು ಹಾಗೂ ಬ್ರೆಸ್ಮನ್ ಮೂರು ವಿಕೆಟ್ ಕಿತ್ತರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ