ಗಾಯಾಳು ಕಾಲಿಸ್‌ಗೆ ಎರಡು ವಾರಗಳ ವಿಶ್ರಾಂತಿ ಸೂಚನೆ

ಮಂಗಳವಾರ, 4 ಜನವರಿ 2011 (18:06 IST)
ಗಾಯದ ನಡುವೆಯೂ ಭಾರತದ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅಮೋಘ ಆಟವಾಡುವ ಮೂಲಕ ಆಕರ್ಷಕ ಶತಕ ಬಾರಿಸಿದ್ದ ಜಾಕ್ವಾಸ್ ಕಾಲಿಸ್ ಅವರಿಗೆ ಇದೀಗ ಎರಡು ವಾರಗಳ ವಿಶ್ರಾಂತಿ ಸೂಚಿಸಲಾಗಿದೆ.

ಶ್ರೀಶಾಂತ್ ಎಸೆದ ದಾಳಿಯೊಂದು ಕಾಲಿಸ್ ಎದೆಗೆ ಬಡಿದಿತ್ತು. ಆದರೂ ಇದನ್ನು ಲೆಕ್ಕಿಸದೇ ಅಮೋಘ ಇನ್ನಿಂಗ್ಸ್ ಕಟ್ಟಿದ್ದ ಅವರು 161 ರನ್ ಗಳಿಸಿದ್ದರು. ಆ ಮೂಲಕ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 362 ರನ್ನುಗಳ ಸವಾಲಿನ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿತ್ತು.

ಕಾಲಿಸ್ ಎದೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಸ್ನಾಯು ಸೆಳೆತ ಕೂಡಾ ಅವರನ್ನು ಕಾಡುತ್ತಿದೆ. ಒಂದು ವೇಳೆ ತಂಡಕ್ಕೆ ಅಗತ್ಯ ಬಿದ್ದ ಸಂದರ್ಭದಲ್ಲಿ ಮಾತ್ರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂದು ತಂಡದ ಮ್ಯಾನೇಜರ್ ಮೊಹಮ್ಮದ್ ಮುಸಾಜಿ ತಿಳಿಸಿದ್ದಾರೆ.

ಭಾರತದ ವಿರುದ್ಧದ ಪಂದ್ಯದಲ್ಲಿ 39ನೇ ಶತಕ ಬಾರಿಸಿದ್ದ ಕಾಲಿಸ್ ನಂತರ ಫಿಲ್ಡೀಂಗ್‌ಗೆ ಇಳಿದಿರಲಿಲ್ಲ. ಇದರೊಂದಿಗೆ ಕಾಲಿಸ್ ಬೌಲಿಂಗ್ ಸೇವೆಯನ್ನೂ ಸ್ಮಿತ್ ಪಡೆ ಕಳೆದುಕೊಳ್ಳುವಂತಾಗಿತ್ತು.

ಎರಡು ವಾರದೊಳಗೆ ಕಾಲಿಸ್ ಫಿಟ್ ಆಗುವ ಭರವಸೆಯಿದೆ. ಒಂದು ವೇಳೆ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೂ ಅಲಭ್ಯರಾಗುವ ಸಾಧ್ಯತೆಯೂ ಇದೆ ಎಂದವರು ಸೇರಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ