ಭಜ್ಜಿ ಕಮಾಲ್; ಕುಸಿದ ಹರಿಣಗಳಿಗೆ ಕಾಲಿಸ್ ಆಸರೆ

ಬುಧವಾರ, 5 ಜನವರಿ 2011 (18:52 IST)
ಇತ್ತೀಚೆಗಿನ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ...

ದಿಟ್ಟ ಹೋರಾಟ ಪ್ರದರ್ಶಿಸಿರುವ ಜಾಕ್ವಾಸ್ ಕಾಲಿಸ್ (67*) ಮತ್ತು ಮಾರ್ಕ್ ಬೌಚರ್ (46*) ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ಭಾರತ ವಿರುದ್ಧ ನಡೆಯುತ್ತಿರುವ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ತಿರುಗೇಟು ನೀಡಿದ್ದು, ಟೀ ವಿರಾಮದ ಹೊತ್ತಿಗೆ 72 ಓವರುಗಳಲ್ಲಿ ಆರು ವಿಕೆಟ್ ಕಳೆದುಕೊಂಡು 212 ರನ್ ಗಳಿಸಿದೆ.

ಈ ಮೊದಲು ಆಫ್ ಸ್ಪಿನ್ನರ್ ಹರಭಜನ್ ಸಿಂಗ್ (73ಕ್ಕೆ 4 ವಿಕೆಟ್) ಸ್ಪಿನ್ ಮೋಡಿಗೆ ಸಿಲುಕಿದ್ದ ಹರಿಣಗಳು ಮೊದಲ ಆರು ವಿಕೆಟುಗಳನ್ನು ಕೇವಲ 130 ರನ್ನುಗಳಿಗೆ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಬಾರಿಸಿದ್ದ ಕಾಲಿಸ್ ತಂಡಕ್ಕೆ ಮತ್ತೊಮ್ಮೆ ಆಸರೆಯಾದರು. ಕಾಲಿಸ್-ಬೌಚರ್ ಜೋಡಿ ಇದೀಗಲೇ ಏಳನೇ ವಿಕೆಟ್‌ಗೆ ಮುರಿಯದ 82 ರನ್ ಪೇರಿಸಿದ್ದು, ಭಾರತೀಯ ಬೌಲರುಗಳನ್ನು ದಿಟ್ಟವಾಗಿ ಎದುರಿಸುತ್ತಿದ್ದಾರೆ.

ಆಲ್ವಿರೊ ಪೀಟರ್‌ಸನ್ (22), ಅಪಾಯಕಾರಿ ಬ್ಯಾಟ್ಸ್‌ಮನ್ ಹಾಶೀಮ್ ಆಮ್ಲಾ (2) ಅವರನ್ನು ಆರಂಭದಲ್ಲೇ ಔಟ್ ಮಾಡಿದ ಭಜ್ಜಿ ಪ್ರವಾಸಿಗರಿಗೆ ಮುನ್ನಡೆ ಒದಗಿಸಿದ್ದರು. ನಂತರ ಬಂದ ಅಬ್ರಹಾಂ ಡಿ ವಿಲಿಯರ್ಸ್ (13) ಎಡಗೈ ವೇಗಿ ಜಹೀರ್ ಖಾನ್ ಬಲೆಗೆ ಸಿಲುಕಿದರು.

ದಕ್ಷಿಣ ಆಫ್ರಿಕಾ ತಂಡವನ್ನು ಆದಷ್ಟು ಬೇಗನೇ ಆಲೌಟ್ ಮಾಡುವಲ್ಲಿ ಯಶಸ್ವಿಯಾದಲ್ಲಿ ಭಾರತಕ್ಕೆ ಈ ಪಂದ್ಯದೊಂದಿಗೆ ಐತಿಹಾಸಿಕ ಸರಣಿ ಗೆಲ್ಲುವ ಉತ್ತಮ ಅವಕಾಶವಿದೆ.

ವೆಬ್ದುನಿಯಾವನ್ನು ಓದಿ