ಕುಕ್, ಬೆಲ್ ಶತಕ; ಇಂಗ್ಲೆಂಡ್‌‍ಗೆ ಬೃಹತ್ ಮುನ್ನಡೆ

ಬುಧವಾರ, 5 ಜನವರಿ 2011 (17:56 IST)
ಆಲಿಸ್ಟಾರ್ ಕುಕ್ ಮತ್ತು ಇಯಾನ್ ಬೆಲ್ ಬಾರಿಸಿದ ಆಕರ್ಷಕ ಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡವು ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದ ಮೂರನೇ ದಿನದಂತ್ಯಕ್ಕೆ ಏಳು ವಿಕೆಟ್ ನಷ್ಟಕ್ಕೆ 488 ರನ್ ಗಳಿಸಿದ್ದು, 208 ರನ್ನುಗಳ ಬೃಹತ್ ಮುನ್ನಡೆ ದಾಖಲಿಸಿದೆ.

ಆಸ್ಟ್ರೇಲಿಯಾ ತಂಡವನ್ನು 280 ರನ್ನುಗಳಿಗೆ ನಿಯಂತ್ರಿಸಿದ್ದ ಇಂಗ್ಲೆಂಡ್ ಎರಡನೇ ದಿನದಂತ್ಯಕ್ಕೆ ಮೂರು ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿ ಉತ್ತಮ ಸ್ಥಿತಿಯಲ್ಲಿತ್ತು. ಮೂರನೇ ದಿನದಾಟದಲ್ಲಿಯೂ ಮತ್ತದೇ ಉತ್ತಮ ಫಾರ್ಮ್ ಮುಂದುವರಿಸಿದ ಆಂಗ್ಲರು ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸರಣಿಯುದ್ಧಕ್ಕೂ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಆಲಿಸ್ಟಾರ್ ಕುಕ್ ಮತ್ತೊಮ್ಮೆ 189 ರನ್ನುಗಳ ಅಮೋಘ ಇನ್ನಿಂಗ್ಸ್ ಕಟ್ಟುವ ಮೂಲಕ ತಂಡಕ್ಕೆ ನೆರವಾದರು. ಇವರಿಗೆ ಉತ್ತಮ ಸಾಥ್ ನೀಡಿದ ಇಯಾನ್ ಬೆಲ್ ಕೂಡಾ ಶತಕದ ಸಾಧನೆ ಮಾಡಿದರು. ಅಜೇಯ ಅರ್ಧಶತಕ ದಾಖಲಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಾಟ್ ಪ್ರಯರ್ (54*) ಕೂಡಾ ತಂಡ ಬೃಹತ್ ಮೊತ್ತ ಪೇರಿಸುವಲ್ಲಿ ನೆರವಾದರು.

ಆದರೆ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಲ್ ಕಾಲಿಂಗ್‌ವುಡ್ (13) ನಿರಾಸೆ ಅನುಭವಿಸಿದರು. ಆಸೀಸ್ ಪರ ಮಿಚ್ಚೆಲ್ ಜಾನ್ಸನ್ ಮೂರು ವಿಕೆಟ್ ಕಿತ್ತರು.

ಇದೀಗಲೇ ಆಶಸ್ ಸರಣಿ ಉಳಿಸಿಕೊಂಡಿರುವ ಇಂಗ್ಲೆಂಡ್ ಈ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರ ಅಂತರದಲ್ಲಿ ತಮ್ಮದಾಗಿಸಿಕೊಳ್ಳಲಿದೆ.

ವೆಬ್ದುನಿಯಾವನ್ನು ಓದಿ