ಗಂಗೂಲಿ ನನ್ನ ಕಿರಿಯ ಸಹೋದರ: ಎಸ್‌ಆರ್‌ಕೆ

ಬುಧವಾರ, 12 ಜನವರಿ 2011 (13:26 IST)
ಐಪಿಎಲ್ ಹರಾಜಿನಲ್ಲಿ ಭಾರತದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅವರನ್ನು ಕಡೆಗಣಿಸಿದ ನಂತರ ಭಾರಿ ಟೀಕೆ ವ್ಯಕ್ತವಾಗಿದ್ದರ ಹಿನ್ನೆಲೆಯಲ್ಲಿ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿರುವ ಕೊಲ್ಕತ್ತಾ ತಂಡದ ಮಾಲಿಕ ಹಾಗೂ ಬಾಲಿವುಡ್ ನಟ ಶಾರೂಕ್ ಖಾನ್ ಇದೀಗ ಮತ್ತೊಂದು ಸುತ್ತಿನ ಸಂಧಾನ ಚರ್ಚೆಗೆ ಮುಂದಾಗಿದ್ದಾರೆ.

ಒಲ್ಲದ ಮನಸ್ಸಿನಿಂದ ಗಂಗೂಲಿ ಅವರನ್ನು ಕೊಲ್ಕತ್ತಾ ತಂಡದಿಂದ ಕೈಬಿಡಲಾಗಿತ್ತು. ಆದರೆ ನಾವು ಯಾವತ್ತೂ ತಂಡದಲ್ಲಿ ದಾದಾ ಅವರನ್ನು ಬಯಸಿದ್ದೆವು ಎಂದು ಬಾಲಿವುಡ್ ಬಾದ್‌ಶಾ ತಿಳಿಸಿದ್ದಾರೆ.

ದಾದಾ ನನಗೆ ಕಿರಿಯ ಸಹೋದರ ಇದ್ದಂತೆ. ಹಾಗೆಯೇ ಅವರ ನೆರವಿನಿಂದ ಇನ್ನಷ್ಟು ಪಂದ್ಯಗಳನ್ನು ಗೆಲ್ಲಬೇಕೆಂಬುದು ನನ್ನ ಬಯಕೆಯಾಗಿದೆ ಎಂದವರು ನುಡಿದರು.

ತಂಡದ ಉತ್ತಮ ಭವಿಷ್ಯಕ್ಕಾಗಿ ತ್ಯಾಗಕ್ಕೆ ಮುಂದಾಗಬೇಕು. ಕ್ರಿಕೆಟನ್ನು ಉತ್ತಮ ಸ್ಫೂರ್ತಿಯೊಂದಿಗೆ ಆಡಬೇಕು ಎಂದು ಎಸ್‌ಆರ್‌ಕೆ ತಿಳಿಸಿದರು.

ಗಂಗೂಲಿ ಅವರನ್ನು ಹರಾಜಿನಲ್ಲಿ ಖರೀದಿಸದಿರುವ ಪ್ರಾಂಚೈಸಿ ನಿಯಮವನ್ನು ಪ್ರತಿಭಟಿಸಿ ಕೊಲ್ಕತ್ತಾ ಸಹಿತ ದೇಶದ ಹಲವೆಡೆ ದಾದಾ ಅಭಿಮಾನಿಗಳು ಶಾರೂಕ್ ಖಾನ್ ಪ್ರತಿಕೃತಿಯನ್ನು ದಹಿಸಿದ್ದರಲ್ಲದೆ ಕೊಲ್ಕತ್ತಾದಲ್ಲಿ ಐಪಿಎಲ್ ಪಂದ್ಯಗಳನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದರು.

ಈ ಎಲ್ಲ ವಿವಾದಗಳಿಂದ ಪಾರಾಗಲು ನಿಟ್ಟಿನಲ್ಲಿ ಕಣ್ಣೊರೆಸುವ ತಂತ್ರಕ್ಕೆ ಮುಂದಾಗಿದ್ದ ಶಾರೂಕ್, ಗಂಗೂಲಿ ಇಲ್ಲದ ಐಪಿಎಲ್ ತಂಡ ಅಸಾಧ್ಯ ಎಂದಿದ್ದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ