ಮುನಾಫ್ ಮಾರಕ ಬೌಲಿಂಗ್;ದ.ಆಫ್ರಿಕಾ ವಿರುದ್ಧ ಭಾರತಕ್ಕೆ ರೋಚಕ ಜಯ
ಭಾನುವಾರ, 16 ಜನವರಿ 2011 (09:55 IST)
PTI
ದಕ್ಷಿಣ ಆಫ್ರಿಕಾ ಮತ್ತು ಟೀಮ್ ಇಂಡಿಯಾ ನಡುವಿನ ದ್ವಿತೀಯ ಏಕದಿನ ಪಂದ್ಯಾಟದಲ್ಲಿ ಭಾರತ ಒಂದು ರನ್ ರೋಚಕ ಜಯಗಳಿಸುವ ಮೂಲಕ ಸೇಡು ತೀರಿಸಿಕೊಂಡಿದ್ದು, ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಮುನಾಫ್ ಪಟೇಲ್ ಅವರ ಬೌಲಿಂಗ್ ಕೈಚಳಕದೊಂದಿಗೆ ಟೀಮ್ ಇಂಡಿಯಾ ಅಂತಿಮ ಕ್ಷಣದಲ್ಲಿ ಗೆಲವಿನ ನಗು ಬೀರುವಂತಾಯಿತು. ಮುನಾಫ್ ದಕ್ಷಿಣ ಆಫ್ರಿಕಾದ ನಾಲ್ಕು ವಿಕೆಟ್ ಅನ್ನು ಕಿತ್ತುಕೊಳ್ಳುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಆರಂಭದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 190ರನ್‌ಗಳ ಸವಾಲು ಒಡ್ಡಿತ್ತು. ನಂತರ ಈ ಗುರಿಯನ್ನು ಬೆನ್ನಟ್ಟಿದ ಎದುರಾಳಿ ದಕ್ಷಿಣ ಆಫ್ರಿಕಾ ತಂಡ 43 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು ಪೆವಿಲಿಯನ್ ಪರೇಡ್ ನಡೆಸಿ 189 ರನ್ ಗಳಿಸಿ ಪರಾಜಯಗೊಂಡಿತು.
ಇದಕ್ಕೂ ಮುನ್ನ ಲಾನ್ವೊಬೊ ಸೊಸೊಬೊ(4 ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಗೆ ಭಾರತದ ದಾಂಡಿಗರು ತತ್ತರಿಸಿ ಕೇವಲ 190 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನಂತರ ದಕ್ಷಿಣ ಆಫ್ರಿಕಾದ ನಾಯಕ ಗ್ರೇಮ್ ಸ್ಮಿತ್ (77) ಅರ್ಧ ಶತಕದ ನೆರವಿನೊಂದಿಗೆ ತಂಡ ಇನ್ನೇನು ಗೆಲುವು ಸಾಧಿಸಿಯೇ ಬಿಟ್ಟಿತ್ತು ಎಂದು ನಿರೀಕ್ಷಿಸಲಾಗಿತ್ತು. ಆದರೆ ಭಾರತದ ಬೌಲರ್‌ಗಳು ಅವರ ಗೆಲುವಿನ ಓಟಕ್ಕೆ ಕಡಿವಾಣ ಹಾಕಿದ್ದು ಪಂದ್ಯದ ಹೈಲೈಟ್ ಆಗಿತ್ತು.
ಭಾರತದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಯುವರಾಜ್ ಸಿಂಗ್ (53) ಮತ್ತು ನಾಯಕ ಮಹೇಂದ್ರ ಸಿಂಗ್ ದೋನಿ (39) ಜತೆಯಾಗಿ ತಾಳ್ಮೆಯ ಆಟ ಪ್ರದರ್ಶಿಸಿ 4ನೇ ವಿಕೆಟ್ ಜತೆಯಾಟದಲ್ಲಿ 83 ರನ್ ಗಳಿಸಿದರಾದರೂ ತಂಡ ಬೃಹತ್ ಮೊತ್ತ ಕಲೆಹಾಕುವಲ್ಲಿ ವಿಫಲವಾಯಿತು.
ನಂತರ ಬಂದ ಸ್ಫೋಟಕ ಬ್ಯಾಟ್ಸ್‌ಮನ್ ಸುರೇಶ್ ರೈನಾ 11 ರನ್‌ಗೆ ಪೆವಿಲಿಯನ್ ಹಾದಿ ಹಿಡಿದರು. ಧೋನಿ ಕೂಡ ಸೊಸೊಬೆ ಬೌಲಿಂಗ್‌ಗೆ ಬೌಲ್ಡ್ ಆದಾಗ ಭಾರತದ ಗೆಲುವಿನ ಕನಸು ಕಮರಿ ಹೋಗಿತ್ತು. ಆದರೆ ಟೀಮ್ ಇಂಡಿಯಾದ ಮುನಾಫ್ ಪಟೇಲ್ ಮಾರಕ ಬೌಲಿಂಗ್ ದಾಳಿಯಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲುಣಿಸಲು ಕಾರಣರಾದರು.