ನಾನು ಕ್ರಿಕೆಟಿಗನಾಗಿ ಯಾವಾಗಲೂ ಪಾರದರ್ಶಕತೆ ಕಾಪಾಡಿಕೊಂಡವ, ಅಲ್ಲದೇ ಎಲ್ಲೂ ರಾಜಕೀಯ ಮಾಡಿಲ್ಲ ಎಂದು ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿನಲ್ಲಿ ಎಲ್ಲ ಫ್ರಾಂಚೈಸಿಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದ ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ನೋವಿನ ಮಾತುಗಳು.
ಪರೋಕ್ಷವಾಗಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿನ ಕಡೆಗಣನೆ ಕುರಿತು ಮೌನ ಮುರಿದು ಮಾತನಾಡಿದ ಅವರು,ನಾನು ಎಂದಿಗೂ ರಾಜಕೀಯ ಮಾಡಿಲ್ಲ. ಕ್ರಿಕೆಟಿಗನಾಗಿ ನಾನು ಪಾರದರ್ಶಕತೆ ಕಾಪಾಡಿಕೊಂಡು ಬಂದ ವ್ಯಕ್ತಿಯಾಗಿದ್ದೇನೆ. ಒಂದು ವೇಳೆ ನಾನು ರಾಜಕೀಯ ಮಾಡಿದ್ದರೆ ಈ ಹಂತ ಏರುತ್ತಿರಲಿಲ್ಲ. ಏನೇ ಮಾಡಿದರೂ ನಿಮಗೆ ಎಲ್ಲ ಕಾಲದಲ್ಲೂ ಉನ್ನತ ಸ್ಥಾನದಲ್ಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದರು.
ಗಂಗೂಲಿ ಐಪಿಎಲ್ನ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಮೂರು ಸೀಸನ್ನಲ್ಲಿ ಆಟವಾಡಿದ್ದರು. ಆದರೆ ಇತ್ತೀಚೆಗಷ್ಟೇ ನಡೆ ಹತ್ತು ಫ್ರಾಂಚೈಸಿಗಳ ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡವೂ ಗಂಗೂಲಿ ಖರೀದಿಗೆ ಮುಂದಾಗಿಲ್ಲವಾಗಿತ್ತು.
ಏತನ್ಮಧ್ಯೆ 38ರ ಹರೆಯದ ಮಾಜಿ ಕಪ್ತಾನ ಸೌರವ್ ಗಂಗೂಲಿ ತನಗಿನ್ನೂ ನಿವೃತ್ತಿಯಾಗುವ ವಯಸ್ಸು ಆಗಿಲ್ಲ ಎಂಬುದಾಗಿ ತಿಳಿಸಿದ್ದಾರೆ. ಅಲ್ಲದೇ ಆಯ್ಕೆಗಾರರು ತಮ್ಮ ಆಯ್ಕೆಯಲ್ಲಿಯೂ ಎಡವುತ್ತಿದ್ದಾರೆ ಎಂದು ಆರೋಪಿಸಿದರು.