ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದುಕೊಂಡಿರುವ ಆತಿಥೇಯ ದಕ್ಷಿಣ ಆಫ್ರಿಕಾ ನಾಯಕ ಗ್ರೇಮ್ಸ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.
ತಂಡದ ಪ್ರಮುಖ ಆಟಗಾರರು ಗಾಯದಿಂದಾಗಿ ಸರಣಿಯನ್ನು ಕಳೆದುಕೊಂಡಿರುವುದು ಟೀಮ್ ಇಂಡಿಯಾದ ಹಿನ್ನೆಡೆಗೆ ಕಾರಣವಾಗಿದೆ. ಗಾಯದ ಸಮಸ್ಯೆಗೆ ತುತ್ತಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್ ಮತ್ತು ಪ್ರವೀಣ್ ಕುಮಾರ್ ಇದೀಗಲೇ ಸರಣಿಯಿಂದ ನಿರ್ಗಮಿಸಿದ್ದಾರೆ.
ಇದರಿಂದಾಗಿ ಮುರಳಿ ವಿಜಯ್ ಜತೆ ರೋಹಿತ್ ಶರ್ಮಾ ತಂಡದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ ಅಮೋಘ ಫಾರ್ಮ್ ಕಂಡುಕೊಂಡಿರುವ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿಯೇ ಉಳಿದುಕೊಳ್ಳಲಿದ್ದಾರೆ.
ಯೂಸುಫ್ ಪಠಾಣ್ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ಎರಡನೇ ಪಂದ್ಯದ ಗೆಲುವಿನ ತಂಡವನ್ನು ತಂಡವನ್ನು ಉಳಿಸಿಕೊಳ್ಳಲಾಗಿದೆ. ಎರಡನೇ ಏಕದಿನವನ್ನು ಒಂದು ರನ್ನಿನಿಂದ ರೋಚಕವಾಗಿ ಗೆದ್ದುಕೊಂಡಿದ್ದ ಟೀಮ್ ಇಂಡಿಯಾ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿತ್ತು.
ಮತ್ತೊಂದೆಡೆ ಆತಿಥೇಯ ದಕ್ಷಿಣ ಆಫ್ರಿಕಾ ಪರ ಫಾವ್ ಡು ಪ್ಲೆಸ್ಸಿಸ್ ತಮ್ಮ ಚೊಚ್ಚಲ ಅಂತರಾಷ್ಟ್ರೀಯ ಪಂದ್ಯವನ್ನಾಡುತ್ತಿದ್ದಾರೆ.