ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಏಕದಿನದಲ್ಲಿ ಎದುರಾದ ಸೋಲಿನ ನಂತರ ಪ್ರತಿಕ್ರಿಯಿಸಿರುವ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಮಧ್ಯಮ ಕ್ರಮಾಂಕ ಹೆಚ್ಚು ಜವಾಬ್ದಾರಿಯುತವಾಗಿ ಆಡಬೇಕು ಎಂದು ಸಹ ಆಟಗಾರರಿಗೆ ಸಲಹೆ ಮಾಡಿದ್ದಾರೆ.
ಮಳೆ ಬಾಧಿತ ನಾಲ್ಕನೇ ಏಕದಿನವನ್ನು ಡಕ್ವರ್ತ್ ನಿಯಮದಡಿ 48 ರನ್ನುಗಳಿಂದ ಗೆದ್ದುಕೊಂಡಿದ್ದ ಹರಿಣಗಳು ಐದು ಪಂದ್ಯಗಳ ಏಕದಿನ ಸರಣಿಯನ್ನು 2-2ರಲ್ಲಿ ಸಮಬಲಗೊಳಿಸಿತ್ತು. ಇದರಿಂದಾಗಿ ಕಾಮನಬಿಲ್ಲಿನ ನಾಡಿನಲ್ಲಿ ಐತಿಹಾಸಿಕ ಏಕದಿನ ಸರಣಿ ದಾಖಲಿಸುವ ಭಾರತದ ಕನಸಿಗೆ ಹಿನ್ನೆಡೆಯುಂಟಾಗಿತ್ತು. ಹೀಗಿದ್ದರೂ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಸ್ಮರಣೀಯ ಸರಣಿ ವಶಪಡಿಸಿಕೊಳ್ಳುವ ಮತ್ತೊಂದು ಅವಕಾಶವಿದೆ.
ವಿರಾಟ್ ಕೊಹ್ಲಿ ಹೊರತಾಗಿ ಇತರೆಲ್ಲ ಬ್ಯಾಟ್ಸ್‌ಮನ್‌ಗಳು ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದರು. ನಮ್ಮ ಪಾಲಿಗೆ ಕೊಹ್ಲಿ ಪಾಸಿಟಿಂವ್ ಅಂಶ. ಮೂರನೇ ಕ್ರಮಾಂಕದಲ್ಲಿ ಅತ್ಯುತ್ತಮ ಆಟವಾಡಿದ ಕೊಹ್ಲಿ ತಂಡವನ್ನು ಮುನ್ನಡೆಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳು ನೆರವಾಗಬೇಕಾಗಿದೆ. ಆದರೆ ನಮ್ಮ ಮಧ್ಯಮ ಕ್ರಮಾಂಕ ಕ್ಲಿಕ್ ಆಗಲೇ ಇಲ್ಲ ಎಂದವರು ಸೇರಿಸಿದರು.
ನಾವು ಶ್ರೇಷ್ಠ ಪ್ರಯತ್ನ ಮಾಡಿದ್ದೇವೆ. ಆದರೆ ಪ್ರತಿ ಬಾರಿಯೂ ಎಲ್ಲವೂ ನಿಮ್ಮ ಪರವಾಗಿರುವುದಿಲ್ಲ ಎಂದವರು ಹೇಳಿದರು. ಒಂದು ಹಂತದಲ್ಲಿ 118 ರನ್ನುಗಳಿಗೆ ಐದು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾಕ್ಕೆ ಜೆ.ಪಿ. ಡ್ಯುಮಿನಿ ನೆರವಾಗಿದ್ದರು.
ಅದೇ ಹೊತ್ತಿಗೆ ನಿರ್ಣಾಯಕ ಐದನೇ ಏಕದಿನದಲ್ಲಿ ಅತಿಯಾದ ಒತ್ತಡವನ್ನು ನಿಭಾಯಿಸಲು ಯಶ್ವಸಿಯಾಗುವ ತಂಡಕ್ಕೆ ಸರಣಿ ವಶಪಡಿಸಿಕೊಳ್ಳುವ ಅವಕಾಶ ಹೆಚ್ಚಿದೆ ಎಂದರು.