ಆಮ್ಲಾ ಅಜೇಯ ಶತಕ; ಭಾರತದೆ ಗೆಲುವಿಗೆ 268 ಟಾರ್ಗೆಟ್

ಭಾನುವಾರ, 23 ಜನವರಿ 2011 (18:08 IST)
ಭಾರತ-ದಕ್ಷಿಣ ಆಫ್ರಿಕಾ ಕನ್ನಡ ಲೈವ್ ಸ್ಕೋರ್ ಬೋರ್ಡ್‌ಗಾಗಿ ಇಲ್ಲಿ ಕ್ಲಿಕ್ಕಿಸಿ....

ಮಳೆ ಬಾಧಿತ ಪಂದ್ಯದಲ್ಲಿ ಹಾಶೀಮ್ ಆಮ್ಲಾ ಬಾರಿಸಿದ ಅಮೋಘ ಶತಕದ ನೆರವಿನಿಂದ ಆತಿಥೇಯ ದಕ್ಷಿಣ ಆಫ್ರಿಕಾ ತಂಡವು 46 ಓವರುಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 250 ರನ್ ಪೇರಿಸಿತ್ತು. ಆದರೆ ಡಕ್ವರ್ತ್ ನಿಯಮದಡಿ ಭಾರತದ ಗೆಲುವಿಗೆ ಅಷ್ಟೇ ಓವರ್‌ನಲ್ಲಿ 268 ರನ್ ಗಳಿಸಬೇಕಾಗಿದೆ.

ದಕ್ಷಿಣ ಆಫ್ರಿಕಾ ತಂಡವು 42 ಓವರುಗಳಲ್ಲಿ 226/2 ಎಂಬ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಮಳೆ ಪಂದ್ಯಕ್ಕೆ ಅಡಚಣೆಪಡಿಸಿತ್ತು. ಇದರಿಂದಾಗಿ ಪಂದ್ಯವನ್ನು 46 ಓವರುಗಳಿಗೆ ಇಳಿಸಲಾಯಿತು. ಆದರೆ ಕೊನೆಯ ನಾಲ್ಕು ಓವರುಗಳಿಗೆ 24 ರನ್ನುಗಳಿಗೆ ಆರು ವಿಕೆಟ್ ಕಬಳಿಸಿದರ ಹೊರತಾಗಿಯೂ ಭಾರತದ ಗೆಲುವಿಗೆ 268 ರನ್ ನಿಗದಿಯಾಗಿದೆ.

ಮತ್ತೆ ದಕ್ಷಿಣ ಆಫ್ರಿಕಾ ಪಾಲಿಗೆ ಆಮ್ಲಜನಕವಾಗಿ ಪರಿಣಮಿಸಿದ ಹಾಶೀಮ್ ಸೆಂಚುರಿಯನ್‌ನಲ್ಲಿ ಭರ್ಜರಿ ಶತಕ ದಾಖಲಿಸುವ ಮೂಲಕ ಗಮನ ಸೆಳೆದರು. 132 ಎಸೆತಗಳನ್ನು ಯಶಸ್ವಿಯಾಗಿ ಎದುರಿಸಿದ ಆಮ್ಲಾ ಒಂಬತ್ತು ಬೌಂಡರಿಗಳ ನೆರವಿನಿಂದ 116 ರನ್ ಗಳಿಸಿ ಅಜೇಯರಾಗುಳಿದರು.

ದ್ವಿತೀಯ ವಿಕೆಟ್‌ಗೆ ಮೊರ್ನೆ ವಾನ್ ಡಬ್ಲ್ಯುವೈಕೆ (56) ಜತೆಗೂಡಿದ ಆಮ್ಲಾ ದ್ವಿತೀಯ ವಿಕೆಟ್‌ಗೆ 97 ರನ್ನುಗಳ ಮಹತ್ವದ ಜತೆಯಾಟ ನೀಡಿದರು. ಅದೇ ರೀತಿ ಜೆ.ಪಿ ಡ್ಯುಮಿನಿ 35 ರನ್ನುಗಳ ಉಪಯುಕ್ತ ನೆರವು ನೀಡಿದರು. ಉಳಿದಂತೆ ನಾಯಕ ಗ್ರೇಮ್ ಸ್ಮಿತ್ (7), ಮತ್ತು ಅಬ್ರಹಾಂ ಡಿ ವಿಲಿಯರ್ಸ್ (11) ಬ್ಯಾಟಿಂಗ್ ವೈಫಲ್ಯ ಕಂಡರು.

ಕೊನಿಗೂ ಒಲಿದ ಟಾಸ್ ಅದೃಷ್ಟ...
ಇದಕ್ಕೂ ಮೊದಲು ಟಾಸ್ ಗೆದ್ದುಕೊಂಡ ಭಾರತ ನಾಯಕ ಮಹೇಂದ್ರ ಸಿಂಗ್ ಧೋನಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಭಾರತದ ತಂಡದಲ್ಲಿ ಒಂದು ಬದಲಾವಣೆ ತರಲಾಗಿತ್ತು. ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ವೇಗಿ ಆಶಿಶ್ ನೆಹ್ರಾ ಸ್ಥಾನದಲ್ಲಿ ಪಿಯೂಷ್ ಚಾವ್ಲಾ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದರು. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ನಾಲ್ಕನೇ ಏಕದಿನದ ವಿಜೇತ ತಂಡವನ್ನೇ ಉಳಿಸಿಕೊಂಡಿತ್ತು.

ವೆಬ್ದುನಿಯಾವನ್ನು ಓದಿ