ದೇಶಕ್ಕಾಗಿ ಆಡುವುದೇ ನನ್ನ ಮೊದಲ ಆದ್ಯತೆ: ಉತ್ತಪ್ಪ

ಭಾನುವಾರ, 23 ಜನವರಿ 2011 (16:00 IST)
ಇತ್ತೀಚೆಗಷ್ಟೇ ಇಂಡಿಯನ್ ಪ್ರೀಮಿಯರ್ ಲೀಗ್‌ ನಾಲ್ಕನೇ ಆವೃತ್ತಿಗಾಗಿ ನಡೆದ ಹರಾಜಿನಲ್ಲಿ ದುಬಾರಿ ಮೊತ್ತಕ್ಕೆ ಹರಾಜಾದ ಎರಡನೇ ಆಟಗಾರ ಎನಿಸಿಕೊಂಡಿದ್ದ ಕರ್ನಾಟಕದ ರಾಬಿನ್ ಉತ್ತಪ್ಪ, ದೇಶಕ್ಕಾಗಿ ಆಡುವುದೇ ನನ್ನ ಮೊದಲ ಆದ್ಯತೆ ಎಂದಿದ್ದಾರೆ.

ವಿಶ್ವಕಪ್‌ಗಾಗಿ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಉತ್ತಪ್ಪ ವಿಫಲರಾಗಿದ್ದರು. ಇದಕ್ಕೂ ಮೊದಲು ಘೋಷಿಸಲಾಗಿದ್ದ 30 ಮಂದಿ ಸಂಭವನೀಯರ ಪಟ್ಟಿಯಲ್ಲೂ ಅವರು ಕಾಣಿಸಿಕೊಂಡಿರಲಿಲ್ಲ.

ಇದರಿಂದಾಗಿ ಸಹಜವಾಗಿಯೇ ಉತ್ತಪ್ಪ ಅವರಿಗೆ ನಿರಾಸೆಯಾಗಿದೆ. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗುವ ಮೂಲಕ ಈ ಕನ್ನಡಿಗ ಆಟಗಾರನಿಗೆ ಉತ್ತಮ ಆಟವಾಡುವ ಸಾಮರ್ಥ್ಯವಿದೆ ಎಂಬುದು ಸಾಬೀತಾಗಿದೆ.

ಐಪಿಎಲ್‌ಗಿಂತ ದೇಶವನ್ನು ಪ್ರತಿನಿಧಿಸುವುದೇ ಪ್ರಾಮುಖ್ಯವಾಗಿರುತ್ತದೆ. ಹಾಗಾಗಿ ಭಾರತವನ್ನು ಪ್ರತಿನಿಧಿಸುವುದೇ ಮೊದಲ ಆದ್ಯತೆ ಎಂದವರು ಹೇಳಿದರು.

ಐಪಿಎಲ್‌ನಲ್ಲಿ 9.66 ಕೋಟಿ ರೂಪಾಯಿಗಳಿಗೆ ಉತ್ತಪ್ಪ ಅವರನ್ನು ಪುಣೆ ಫ್ರಾಂಚೈಸಿ ಖರೀದಿಸಿತ್ತು. ಹೊಸ ತಂಡದಲ್ಲಿ ನನ್ನ ಜವಾಬ್ದಾರಿಯು ಮತ್ತಷ್ಟು ಹೆಚ್ಚಿದೆ ಎಂದವರು ಸೇರಿಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿಗಳಿಗೆ, ವಿಶೇಷ ಸುದ್ದಿಗಳಿಗೆ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ವೆಬ್ದುನಿಯಾವನ್ನು ಓದಿ