ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಈಡೆನ್ ಗಾರ್ಡೆನ್ ಮೈದಾನನಲ್ಲಿ ಫೆಬ್ರವರಿ 27ರಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವನ್ನು ಸ್ಥಳಾಂತರಿಸಲಾಗಿದೆ.
ಈ ಬಗ್ಗೆ ಬಿಸಿಸಿಐ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅಧಿಕೃತವಾಗಿ ಪ್ರಕಟಿಸಿದೆ. ಆದರೆ ಈಡೆನ್‌ನಿಂದ ಶಿಫ್ಟ್ ಆಗಿರುವ ಪಂದ್ಯ ಎಲ್ಲಿ ನಡೆಯಲಿದೆ ಎಂಬುದನ್ನು ಘೋಷಿಸಿಲ್ಲ. ಆದರೂ ಈ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸುವುದು ಬಹುತೇಕ ಖಚಿತವಾಗಿದೆ.
ಈ ಹಿಂದೆ ವಿಶ್ವಕಪ್‌ನ ನಾಲ್ಕು ಪಂದ್ಯಗಳಿಗೆ ಕೊಲ್ಕತ್ತಾ ಆತಿಥ್ಯ ವಹಿಸಲಿದೆ ಎಂದು ವೇಳಾಪಟ್ಟಿ ನಿಗದಿಯಾಗಿತ್ತು. ಆದರೆ ಸ್ಟೇಡಿಯಂನ ನವೀಕರಣ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಇಲ್ಲಿ ನಡೆಯಲಿರುವ ಮೊದಲ ಪಂದ್ಯವನ್ನು ಸ್ಥಳಾಂತರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಉಳಿದಂತೆ ಉಳಿದ ಮೂರು ಪಂದ್ಯಗಳನ್ನು ಕೊಲ್ಕತ್ತಾದಲ್ಲೇ ಉಳಿಸಿಕೊಳ್ಳಲಾಗಿದೆ. ಆದರೂ ಅಪಾಯದಿಂದ ಪಾರಾಗಿಲ್ಲ. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕಾದ ಒತ್ತಡವನ್ನು ಎದುರಿಸುತ್ತಿದೆ.
ಒಟ್ಟಾರೆಯಾಗಿ ಈ ನಿರ್ಧಾರ ಕೊಲ್ಕತ್ತಾ ಅಭಿಮಾನಿಗಳ ಪಾಲಿಗೆ ಭಾರಿ ನಿರಾಸೆಯನ್ನುಂಟು ಮಾಡಿದೆ. ಈ ಹಿಂದೆ 1987ರ ಏಕದಿನ ವಿಶ್ವಕಪ್ ಫೈನಲ್ ಮತ್ತು 1996ರ ಸೆಮಿಫೈನಲ್ ಪಂದ್ಯವನ್ನು ಕೊಲ್ಕತ್ತಾದ ಈಡೆನ್ ಗಾರ್ಡನ್ ಮೈದಾನ ಯಶಸ್ವಿಯಾಗಿ ಆಯೋಜಿಸಿತ್ತು.
ಬೆಂಗಳೂರಿಗೆ ಶಿಫ್ಟ್? ಮತ್ತೊಂದೆಡೆ ಕೊಲ್ಕತ್ತಾದಿಂದ ಸ್ಥಳಾಂತರಗೊಂಡಿರುವ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನ ಆತಿಥ್ಯ ವಹಿಸುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳಿವೆ. ದೆಹಲಿ ಮತ್ತು ಕಟಕ್‌ಗೂ ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ.