ಮುಂಬರುವ ಏಕದಿನ ವಿಶ್ವಕಪ್‌ನಲ್ಲಿಯೂ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಸ್ಥಾನವನ್ನು ಶಾಹಿದ್ ಆಫ್ರಿದಿ ಅವರೆ ವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ನ್ಯೂಜಿಲೆಂಡ್‌ನಲ್ಲಿರುವ ಪಾಕಿಸ್ತಾನ ತಂಡದ ಆಡಳಿತ ಮಂಡಳಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ನಡೆಸಿದ ಸುದೀರ್ಘ ಚರ್ಚೆಯ ನಂತರ ಪಿಸಿಬಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಪ್ರಸಕ್ತ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಪಾಕಿಸ್ತಾನ ಭಾಗವಹಿಸುತ್ತಿದೆ.
ಏಷ್ಯಾ ಉಪಖಂಡದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ಆತಿಥ್ಯ ವಹಿಸಲಿದೆ. ಈ ಹಿಂದೆ ಪಾಕಿಸ್ತಾನಕ್ಕೂ ಆತಿಥೇಯ ಹಕ್ಕು ನೀಡಲಾಗಿತ್ತಾದರೂ ಭದ್ರತಾ ಕಾರಣಗಳಿಂದಾಗಿ ಅಲ್ಲಿನ ಪಂದ್ಯಗಳನ್ನು ಸ್ಥಳಾಂತರಿಸಲಾಗಿತ್ತು.
ತಂಡದ ಆಡಳಿತ ಮಂಡಳಿಯೊಂದಿಗೆ ನಡೆಸಿದ ಚರ್ಚೆಯ ನಂತರ ಈ ತೀರ್ಮಾನಕ್ಕೆ ಬರಲಾಗಿದೆ. ಆದರೆ ಆಫ್ರಿದಿಗೆ ಬೆಂಬಲ ನೀಡದ ಪಿಸಿಬಿ ಮುಖ್ಯಸ್ಥ ಇಜಾಜ್ ಭಟ್, ಟೆಸ್ಟ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿರುವ ಮಿಸ್ಪಾ ಉಲ್ ಹಕ್‌ನತ್ತ ಒಲವು ತೋರಿದ್ದಾರೆ. ಹೀಗಿದ್ದರೂ ಎಲ್ಲರ ಅಭಿಪ್ರಾಯ ಸಂಗ್ರಹಿಸಿರುವ ಭಟ್ ನಾಯಕತ್ವ ಬದಲಾಯಿಸುವ ಅಪಾಯಕ್ಕೆ ಮುಂದಾಗುತ್ತಿಲ್ಲ ಎಂದು ವರದಿಗಳು ಹೇಳಿವೆ.
ಆಫ್ರಿದಿ ನಾಯಕತ್ವವನ್ನು ತಂಡದ ಹಿರಿಯ ಆಟಗಾರರಾದ ಶೋಯಿಬ್ ಅಖ್ತರ್, ಅಬ್ದುಲ್ ರಜಾಕ್ ಮತ್ತು ಉಮರ್ ಗುಲ್ ಬೆಂಬಲಿಸುತ್ತಾರೆ. ಹೀಗಾಗಿ ಈ ಅಂತಿಮ ಘಟ್ಟದಲ್ಲಿ ತಂಡದೊಳಗೆ ಆಂತರಿಕ ಕಲಹವನ್ನುಂಟು ಮಾಡಲು ಪಿಸಿಬಿ ಬಯಸಿಲ್ಲ ಎಂದು ಹೇಳಲಾಗಿದೆ.