ಆಸ್ಟ್ರೇಲಿಯಾ ವಿರುದ್ಧದ 'ಫೈನಲ್' ಪಂದ್ಯಕ್ಕೆ ಸೆಹ್ವಾಗ್ ಫಿಟ್

ಮಂಗಳವಾರ, 22 ಮಾರ್ಚ್ 2011 (18:03 IST)
ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಗುರುವಾರ ನಡೆಯಲಿರುವ 'ಫೈನಲ್' ಎಂದೇ ಬಿಂಬಿತವಾಗಿರುವ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹೊಡೆಬಡಿ ದಾಂಡಿಗ ವೀರೇಂದ್ರ ಸೆಹ್ವಾಗ್ ಆಡುವುದು ಬಹುತೇಕ ಖಚಿತವಾಗಿದೆ.

ಈ ಪಂದ್ಯದಲ್ಲಿ ಸೆಹ್ವಾಗ್ ಆಡಲಿದ್ದಾರೆಯೇ ಎಂದು ತಂಡದ ಮೂಲವೊಂದರಲ್ಲಿ ಪ್ರಶ್ನಿಸಿದಾಗ, ಈ ಪಂದ್ಯಕ್ಕೆ ಆಯ್ಕೆ ಮಾಡಲು ಪ್ರತಿಯೊಬ್ಬರೂ ಲಭ್ಯರಿದ್ದಾರೆ. ಅವರು ಕೂಡ ಫಿಟ್ ಆಗಿದ್ದಾರೆ ಎಂದಷ್ಟೇ ಪ್ರತಿಕ್ರಿಯೆ ಬಂದಿದೆ. ಗಾಯಾಳುವಾಗಿರುವ ಅವರು ಈಗ ಸುಧಾರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ.

ಮಂಡಿ ಗಾಯದಿಂದ ಬಳಲುತ್ತಿದ್ದ ಸೆಹ್ವಾಗ್ ವೆಸ್ಟ್‌ಇಂಡೀಸ್ ವಿರುದ್ಧ ಭಾನುವಾರ ಚೆನ್ನೈಯಲ್ಲಿ ನಡೆದಿದ್ದ ಲೀಗ್ ಹಂತದ ಕೊನೆಯ ಪಂದ್ಯದಿಂದ ಹೊರಗುಳಿದಿದ್ದರು. ವಿಶ್ವಕಪ್ ಆರಂಭದಿಂದಲೇ ಅವರಿಗೆ ಮಂಡಿ ನೋವು ತೀವ್ರವಾಗಿ ಬಾಧಿಸುತ್ತಿದ್ದು, ಪ್ರಸಕ್ತ ಚೇತರಿಸಿಕೊಂಡಿದ್ದಾರೆ. ಇಂದು ಅಭ್ಯಾಸದಲ್ಲಿ ಕೂಡ ಪಾಲ್ಗೊಂಡಿದ್ದಾರೆ.

ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಪಂದ್ಯವನ್ನು ಪ್ರತಿಯೊಬ್ಬರೂ ಎದುರು ನೋಡುತ್ತಿದ್ದಾರೆ ಎಂದು ತಂಡದ ಮ್ಯಾನೇಜರ್ ರಂಜಿಬ್ ಬಿಸ್ವಾಲ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅವರು ಆಡುವುದು ಖಚಿತವಾದರೆ, ಸುರೇಶ್ ರೈನಾ ಅಥವಾ ಯೂಸುಫ್ ಪಠಾಣ್ ತಂಡದಿಂದ ಹೊರಗುಳಿಯಲಿದ್ದಾರೆ. ಟೂರ್ನಮೆಂಟ್ ಉದ್ದಕ್ಕೂ ಯೂಸುಫ್ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. ಸುರೇಶ್ ರೈನಾ ಕೂಡ ವಿಂಡಿಗರ ವಿರುದ್ಧದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದರು.

ಕ್ವಾರ್ಟರ್ ಫೈನಲ್ ಪಂದ್ಯಕ್ಕಾಗಿ ಅಹಮದಾಬಾದ್‌ಗೆ ಬಂದಿರುವ ಟೀಮ್ ಇಂಡಿಯಾ ಇಂದು ಅಭ್ಯಾಸ ನಡೆಸುತ್ತಿದೆ. ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ವೇಗಿ ಎಸ್. ಶ್ರೀಶಾಂತ್ ಅಭ್ಯಾಸದಿಂದ ಹೊರಗುಳಿದಿದ್ದಾರೆ.

ನಾಯಕ ಧೋನಿ, ಸಚಿನ್ ತೆಂಡೂಲ್ಕರ್, ಸೆಹ್ವಾಗ್ ಮುಂತಾದವರು ಅಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ. ಕೋಚ್ ಗ್ಯಾರಿ ಕರ್ಸ್ಟನ್ ಅವರು ವಿಶೇಷವಾಗಿ ಸೆಹ್ವಾಗ್ ಬ್ಯಾಟಿಂಗ್ ಬಗ್ಗೆ ಗಮನ ಹರಿಸಿದರು. ವೇಗದ ಎಸೆತಗಳನ್ನು ಎದುರಿಸಿದ ಸೆಹ್ವಾಗ್ ಈ ಸಂದರ್ಭದಲ್ಲಿ ಚೇತೋಹಾರಿಯಾಗಿ ಕಂಡು ಬಂದರು.

ವೆಬ್ದುನಿಯಾವನ್ನು ಓದಿ