ಇತಿಹಾಸ ಬೆನ್ನತ್ತಿ ಹೊರಟಿರುವ ಮಹಿ ಬಳಗ; ಲಂಕಾ ಸವಾಲಾಗಲಿದೆಯೇ?

ಶುಕ್ರವಾರ, 1 ಏಪ್ರಿಲ್ 2011 (15:25 IST)
PTI
28 ವರ್ಷಗಳ ಆನಂತರ ಇತಿಹಾಸವನ್ನು ಪುನರಾವರ್ತಿಸಲು ಹೊರಟಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಮ್ ಇಂಡಿಯಾ, ಶನಿವಾರ ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ಸವಾಲನ್ನು ಎದುರಿಸಲಿದೆ.

1983ರ ಸಾಧನೆ ಆವರ್ತನೆ ನಮ್ಮ ಗುರಿ ಎಂಬ ಛಲದೊಂದಿಗೆ ಮೈದಾನಕ್ಕಿಳಿಯಲಿರುವ ಮೆನ್ ಇನ್ ಬ್ಲ್ಯೂ ಪಡೆ ಈ ಬಾರಿ ಗೆಲುವಿಗಿಂತ ಕಡಿಮೆಯಾದ ಫಲಿತಾಂಶ ನಿರೀಕ್ಷಿಸುತ್ತಿಲ್ಲ.

ಲಂಕಾ ಘರ್ಜನೆಯನ್ನು ನಿಲ್ಲಿಸಲು ಹುಲಿ ಪಡೆ ಹೊರಟಿದೆ. ವಿಶ್ವ ವಿಖ್ಯಾತ ಆಟಗಾರರಾದ ಸಚಿನ್ ತೆಂಡೂಲ್ಕರ್ ಮತ್ತು ಮುತ್ತಯ್ಯ ಮುರಳೀದರನ್ ಅವರ ಬ್ಯಾಟ್ ಮತ್ತು ಬಾಲ್ ನಡುವಣ ಯುದ್ಧಕ್ಕೂ ಈ ಪಂದ್ಯ ವೇದಿಕೆವೊದಗಿಸಲಿದೆ.

ಅದೃಷ್ಟ ನಾಯಕನೆಂದೇ ಬಿಂಬಿತವಾಗಿರುವ ಧೋನಿ ಎರಡನೇ ಬಾರಿಗೆ ವಿಶ್ವಕಪ್‌ಗೆ ಮುತ್ತಿಕ್ಕಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಹಿಂದೆ 2007ರಲ್ಲಿ ನಡೆದಿದ್ದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಎತ್ತಿ ಹಿಡಿದಿದ್ದ ಜಾರ್ಖಂಡ್‌ನ ಈ 'ಕೂಲ್' ಕಪ್ತಾನ ಈ ಬಾರಿಯೂ ತಮ್ಮ ಜಾಣತನದಿಂದ ಲಂಕನ್ನರಿಗೆ ಚಳ್ಳೆ ಹಣ್ಣು ತಿನ್ನಿಸಲು ಹೊರಟಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100ನೇ ಶತಕ ಎದುರು ನೋಡುತ್ತಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ತವರಿನ ಮೈದಾನದಲ್ಲಿಯೇ ಈ ಸಾಧನೆ ಮಾಡಲಿ ಎಂಬುದು ಶತಕೋಟಿ ಅಭಿಮಾನಿಗಳ ಪ್ರಾರ್ಥನೆಯಾಗಿದೆ.

ಇದೇ ಮೊದಲ ಬಾರಿಗೆ ಏಷ್ಯಾದ ಎರಡು ಪ್ರಬಲ ತಂಡಗಳು ವಿಶ್ವಕಪ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಕಳೆದ ಏಷ್ಯಾ ಕಪ್ ಫೈನಲ್‌ನಲ್ಲಿ ಲಂಕಾವನ್ನು ಮಣಿಸಿರುವುದು ಭಾರತಕ್ಕೆ ನೈತಿಕ ಬಲ ನೀಡಲಿದೆ.

ಇತ್ತಂಡಗಳಿಗೂ ಗಾಯಾಳುಗಳ ಸಮಸ್ಯೆ ಕಾಡುತ್ತಿದೆ. ಕೈಬೆರಳಿಗೆ ಗಾಯಮಾಡಿಕೊಂಡಿರುವ ಏಡಗೈ ವೇಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ನಾಯಕ ಧೋನಿ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಆರ್. ಅಶ್ವಿನ್ ಅಥವಾ ಎಸ್. ಶ್ರೀಶಾಂತ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.

ಮತ್ತೊಂದೆಡೆ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಮತ್ತು ಆಂಗಲೋ ಮ್ಯಾಥ್ಯೂಸ್ ಗಾಯಗೊಂಡಿರುವುದು ಲಂಕಾವನ್ನು ಹಿನ್ನಡೆಗೆ ತಳ್ಳುವಂತಾಗಿದೆ. ಆದರೆ ಏನೇ ಆಗ್ಲಿ ವಿಶ್ವಕಪ್ ಫೈನಲ್ ಆಡಿಯೇ ತೀರುತ್ತೇನೆ ಎಂದು ಮುರಳಿ ಸಾರಿದ್ದಾರೆ. ಇದರಿಂದಾಗಿ ಈ ಫೈನಲ್ ಪಂದ್ಯ ಮತ್ತಷ್ಟು ರೋಚಕತೆ ಸಾಕ್ಷಿಯಾಗಲಿದೆ.

ಭಾರತೀಯರ ಪಾಲಿಗೆ ಕೋಚ್ ಗ್ಯಾರಿ ಕರ್ಸ್ಟನ್ ಅವರಿಗಿದು ಕೊನೆಯ ಪಂದ್ಯವಾಗಿರಲಿದೆ. ವಿಶ್ವಕಪ್ ಬಳಿಕ ಕೋಚ್ ಗ್ಯಾರಿ ಅವರ ಗುತ್ತಿಗೆ ಒಪ್ಪಂದವು ಕೊನೆಗೊಳ್ಳಲಿದೆ.

ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಎಂದಿನಂತೆ ಬಿರುಸಿನ ಆರಂಭವೊದಗಿಸಬೇಕಾಗಿದೆ. ಯುವರಾಜ್ ಸಿಂಗ್ ಫಾರ್ಮ್ ಭಾರತದ ಟ್ರಂಪ್ ಕಾರ್ಡ್. ಸೆಮಿಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿದ್ದರೂ ಬೌಲಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವಿ ಮತ್ತೊಮ್ಮೆ ಮಿಂಚಿನ ಪ್ರದರ್ಶನ ನೀಡುವ ಭರವಸೆಯಲ್ಲಿದ್ದಾರೆ.

ಟೂರ್ನಿಯುದ್ಧಕ್ಕೂ ಸ್ಥಿರ ಪ್ರದರ್ಶನ ನೀಡಿರುವ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಭಾರತದ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ಸುರೇಶ್ ರೈನಾ ಅವರ ಸಮಯೋಚಿತ ಬ್ಯಾಟಿಂಗ್ ಕೆಳಕ್ರಮಾಂಕದಲ್ಲಿ ಭಾರತವನ್ನು ಮತ್ತಷ್ಟು ಬಲಿಷ್ಠವನ್ನಾಗಿಸಿದೆ.

ಆದರೆ ನಾಯಕ ಮಹೇಂದ್ರ ಸಿಂಗ್ ಧೋನಿ ಕಳಪೆ ಫಾರ್ಮ್ ಚಿಂತೆಗೆ ಕಾರಣವಾಗಿದೆ. ನಾಯಕತ್ವ ಒತ್ತಡವೂ ಅವರ ಫಾರ್ಮ್ ಹಿನ್ನಡೆಗೆ ಕಾರಣವಾಗಿರಬಹುದು. ಆದರೆ ಲಂಕಾ ವಿರುದ್ಧದ ಫೈನಲ್‌ನಲ್ಲಿ ಫಾರ್ಮ್ ಕಂಡುಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ.

ಬೌಲಿಂಗ್‌ನಲ್ಲಿ ಜಹೀರ್ ಖಾನ್ ಭಾರತದ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಕೆಲವೊಂದು ಕಳಪೆ ಪ್ರದರ್ಶನ ಹೊರತಾಗಿಯೂ ಮುನಾಫ್ ಪಟೇಲ್ ನಾಯಕನ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಕರಾರುವಾಕ್ ದಾಳಿ ಸಂಘಟಿಸುತ್ತಿರುವ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಭಾರತದ ಪ್ರಧಾನ ಅಸ್ತ್ರವಾಗಲಿದ್ದಾರೆ. ನಿರ್ಣಾಯಕ ಹಂತದಲ್ಲಿ ವಿಕೆಟ್ ಕಬಳಿಸುವ ತಂತ್ರ ಹೊಂದಿರುವ ಭಜ್ಜಿ ನಿಜಕ್ಕೂ ತಂಡಕ್ಕೆ ಪ್ಲಸ್ ಪಾಯಿಂಟ್. ಹಾಗೆಯೇ ಆರ್. ಅಶ್ವಿನ್ ಮತ್ತೊಮ್ಮೆ ಪವರ್-ಪ್ಲೇನಲ್ಲಿ ತಮ್ಮ ವೈವಿಧ್ಯತೆಯನ್ನು ಪ್ರದರ್ಶಿಸುವ ಭರವಸೆ ಹೊಂದಿದ್ದಾರೆ. ಈ ನಡುವೆ ಉದ್ಘಾಟನಾ ಪಂದ್ಯದಲ್ಲಿ ಕಾಣಿಸಿಕೊಂಡಿದ್ದ ಟೆಪರ್‌ಮೆಂಟ್ ವೇಗಿ ಶ್ರೀಶಾಂತ್ ಫೈನಲ್‌ನಲ್ಲಿ ನಾಯಕನ ಮನ ಗೆಲ್ಲುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತೊಂದೆಡೆ ಅಗ್ರ ನಾಲ್ಕು ಆಟಗಾರರ ಅಮೋಘ ಪ್ರದರ್ಶನವು ಲಂಕಾಗೆ ಬೆನ್ನಲುಬು ಆಗಿದೆ. ಸ್ಫೋಟಕ ಆರಂಭಿಕ ತಿಲಕರತ್ನೆ ದಿಲ್‌ಶಾನ್, ಉಪುಲ್ ತರಂಗ, ನಾಯಕ ಕುಮಾರ ಸಂಗಕ್ಕರ ಮತ್ತು ಮಹೇಲಾ ಜಯವರ್ಧನೆ ಅಮೋಘ ಫಾರ್ಮ್ ಭಾರತದ ಆತಂಕಕ್ಕೆ ಕಾರಣವಾಗಿದೆ.

ಕಳೆದ ಬಾರಿ ಸ್ವಲ್ಪದರಲ್ಲೇ ತಪ್ಪಿ ಹೋಗಿದ್ದ ಪ್ರಶಸ್ತಿಯನ್ನು ಈ ಬಾರಿ ಗೆಲ್ಲುವ ಛಲದೊಂದಿಗೆ ಲಂಕಾ ಕಣಕ್ಕಿಳಿಯಲಿದೆ. ಮ್ಯಾಥ್ಯೂಸ್ ಗಾಯಳುವಾಗಿರುವುದು ಹಿನ್ನಡೆಗೆ ಕಾರಣವಾಗಿದ್ದರೂ ತಿಸಾರಾ ಪರೇರಾ ಅವರಂತಹ ಆಲ್‌ರೌಂಡರುಗಳ ಉಪಯುಕ್ತ ನೆರವಿನಿಂದ ಯಾವುದೇ ತಂಡವನ್ನಾದರೂ ಮಣಿಸುವ ತಾಕತ್ತು ಹೊಂದಿದೆ.

ಯಾರ್ಕರ್ ಎಸೆತವನ್ನು ಪರಿಣಾಮಕಾರಿಯಾಗಿ ಎಸೆಯಬಲ್ಲ ಲಸಿತ್ ಮಾಲಿಂಗರಂತಹ ದಾಳಿಗಾರರನ್ನು ಭಾರತ ಎಚ್ಚರಿಕೆಯಿಂದಲೇ ಎದುರಿಸಬೇಕಾಗುತ್ತದೆ. ಚಾಂಪಿಯನ್ ಬೌಲರ್ ಮುತ್ತಯ್ಯ ಮುರಳೀಧರನ್, ನುವಾನ್ ಕುಲಶೇಖರ ಮತ್ತು ಕ್ಯಾರಮ್ ಬಾಲ್ ಸ್ಪಷಲಿಸ್ಟ್ ಅಜಂತಾ ಮೆಂಡೀಸ್ ಬಗ್ಗೆಯೂ ಭಾರತ ಎಚ್ಚರಿಕೆ ವಹಿಸಬೇಕು.

ಒಟ್ಟಾರೆಯಾಗಿ ಈ ಮಹಾ ಕದನವು ಕ್ರಿಕೆಟ್ ಪ್ರಿಯರಿಗೆ ರಸದೌತಣವನ್ನು ಒದಗಿಸಲಿದೆ. ಆ ಮೂಲಕ ಕೋಟ್ಯಂತರ ಭಾರತೀಯರ ವಿಶ್ವಕಪ್ ಕನಸು ಕೂಡಾ ನನಸಾಗಲಿ ಎಂಬುದು ನಮ್ಮ ಹಾರೈಕೆಯಾಗಿದೆ.

ತಂಡ ಇಂತಿದೆ...

ಭಾರತ: ಮಹೇಂದ್ರ ಸಿಂಗ್ ಧೋನಿ (ನಾಯಕ, ವಿಕೆಟ್ ಕೀಪರ್), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಸುರೇಶ್ ರೈನಾ, ಹರಭಜನ್ ಸಿಂಗ್, ಆರ್. ಅಶ್ವಿನ್, ಜಹೀರ್ ಖಾನ್, ಮುನಾಫ್ ಪಟೇಲ್, ಯೂಸುಫ್ ಪಠಾಣ್, ಎಸ್. ಶ್ರೀಶಾಂತ್, ಪಿಯೂಷ್ ಚಾವ್ಲಾ ಮತ್ತು ಆಶಿಶ್ ನೆಹ್ರಾ.

ಶ್ರೀಲಂಕಾ: ಕುಮಾರ ಸಂಗಕ್ಕರ (ನಾಯಕ, ವಿಕೆಟ್ ಕೀಪರ್), ಮಹೇಲಾ ಜಯವರ್ಧನೆ, ತಿಲಕರತ್ನೆ ದಿಲ್‌ಶಾನ್, ಉಪುಲ್ ತರಂಗ, ತಿಲನ್ ಸಮರವೀರ, ಚಮರ ಸಿಲ್ವಾ, ಚಮರ ಕಪುಗೇಡರಾ, ತಿಸಾರಾ ಪರೇರಾ, ನುವಾನ್ ಕುಲಶೇಖರ, ಲಸಿತ್ ಮಾಲಿಂಗ, ದಿಲ್ಹಾರಾ ಫೆರ್ನಾಂಡೊ, ಮುತ್ತಯ್ಯ ಮುರಳೀಧರನ್, ಅಜಂತಾ ಮೆಂಡೀಸ್, ರಂಗನಾ ಹೇರಾತ್, ಆಂಗಲೋ ಮ್ಯಾಥ್ಯೂಸ್, ಚಾಮಿಂಡ ವಾಸ್ ಮತ್ತು ಸುರಾಜ್ ರಣಧೀವ್

ಫೀಲ್ಡ್ ಅಂಪಾಯರ್: ಸೈಮನ್ ಟಫೆಲ್ ಮತ್ತು ಅಲೀಮ್ ದಾರ್
ಥರ್ಡ್ ಅಂಪಾಯರ್: ಇಯಾನ್ ಗೂಲ್ಡ್
ನಾಲ್ಕನೇ ಅಂಪಾಯರ್: ಸ್ಟೀವ್ ಡೇವಿಸ್
ಮ್ಯಾಚ್ ರೆಫರಿ: ಜೆಫ್ ಕ್ರೋವ್
ಪಂದ್ಯಾರಂಭ: ಮಧ್ಯಾಹ್ನ 2.30ಕ್ಕೆ

ವೆಬ್ದುನಿಯಾವನ್ನು ಓದಿ