ಭಾರತೀಯರನ್ನು ನಾವ್ಯಾಕೆ ದ್ವೇಷಿಸುತ್ತೇವೆ?; ಆಫ್ರಿದಿ ಪ್ರಶ್ನೆ

ಭಾನುವಾರ, 3 ಏಪ್ರಿಲ್ 2011 (09:12 IST)
PTI
ಹಿಂದಿನಿಂದಲೂ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯಕ್ಕೆ ಭಾರಿ ಹೈಪ್ ಸೃಷ್ಟಿ ಮಾಡಲಾಗುತ್ತಿದೆ. ಈ ಬಗ್ಗೆ ಪಾಕಿಸ್ತಾನ ನಾಯಕ ಶಾಹಿದ್ ಆಫ್ರಿದಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಭಾರತದ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಸೋಲಿನ ನಂತರ ತವರಿಗೆ ಮರಳಿದ್ದ ಆಫ್ರಿದಿ ಕರಾಚಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ರೀತಿಯಾಗಿ ನುಡಿದರು. ನಾವ್ಯಾಕೆ ಭಾರತವನ್ನು ದ್ವೇಷಿಸುತ್ತೇವೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಜನರ ಯೋಚನೆ ಏನೆಂಬುದು ನನಗೆ ತಿಳಿಯುತ್ತಿಲ್ಲ. ಇಷ್ಟಾಕ್ಕೂ ಭಾರತದ ವಿರುದ್ಧ ವೈರತ್ವವಾದರೂ ಏಕೆ ಎಂದವರು ಪ್ರಶ್ನೆ ಮಾಡಿದರು.

ಒಂದು ವೇಳೆ ವೈರತ್ವವಿದ್ದಲ್ಲಿ ಮಾತ್ಯಾಕೆ ಬಹುತೇಕ ಎಲ್ಲ ಭಾರತೀಯ ಚಾನೆಲುಗಳನ್ನು ಇಲ್ಲಿನ ಎಲ್ಲ ಮನೆಗಳಲ್ಲೂ ವೀಕ್ಷಿಸಲಾಗುತ್ತಿದೆ. ನಮ್ಮ ಮದುವೆ ಸಮಾರಂಭಗಳು ಅಲ್ಲಿಗೆ ಸಾಮತ್ಯೆ ಹೊಂದಿವೆ. ಬಹುತೇಕ ಎಲ್ಲ ಸಿನೆಮಾಗಳನ್ನು ಇಲ್ಲಿ ನೋಡಲಾಗುತ್ತಿದೆ. ಇಷ್ಟೆಲ್ಲಾ ಆದರೂ ಭಾರತವನ್ನು ದ್ವೇಷಿಸಲಾಗುತ್ತದೆ. ಕೇವಲ ಭಾರತಕ್ಕೆ ಮಾತ್ರ ಇದು ಯಾಕೆ ಸೀಮಿತವಾಗಿದೆ ಎಂದವರು ಪ್ರಶ್ನೆ ಮಾಡಿದರು.

ಇವೆಲ್ಲವನ್ನು ಗಮನಿಸಿದಾಗ ಆಫ್ರಿದಿ ತುಂಬಾನೇ ಬದಲಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಭಾರತದ ವಿರುದ್ಧದ ಪಂದ್ಯದಲ್ಲಿಯೇ ಇದು ಗಮನಕ್ಕೆ ಬಂದಿತ್ತು. ಯಾವುದೇ ಅತಿರೇಕದ ವರ್ತನೆಯನ್ನು ತೋರದ ಪಾಕ್‌ನ ಈ ನಾಯಕ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಅಲ್ಲದೆ ವಿಶ್ವಕಪ್‌ನಲ್ಲಿ ಭಾರತಕ್ಕೆ ಶುಭ ಹಾರೈಸಿದ್ದರು.

ಎಲ್ಲವನ್ನೂ ಸರಿಯಾಗಿ ರೀತಿಯಲ್ಲಿಯೇ ನೋಡಬೇಕು. ಕ್ರಿಕೆಟನ್ನು ಕ್ರೀಡಾ ಮನೋಭಾವದಿಂದಲೇ ಕಾಣಬೇಕು. ಭವಿಷ್ಯದಲ್ಲೂ ಎಲ್ಲ ಅಗ್ರ ತಂಡಗಳನ್ನು ಮಣಿಸುವ ಶಕ್ತಿ ಪಾಕಿಸ್ತಾನ ಹೊಂದಿದೆ ಎಂದು ಆಫ್ರಿದಿ ಹೇಳಿದರು.

ವೆಬ್ದುನಿಯಾವನ್ನು ಓದಿ