ವಿಶ್ವಕಪ್ ಟ್ರೋಫಿ ಅಸಲಿ; ಪ್ರತಿಕೃತಿಯಲ್ಲ: ಐಸಿಸಿ ಸ್ಪಷ್ಟನೆ

ಸೋಮವಾರ, 4 ಏಪ್ರಿಲ್ 2011 (15:44 IST)
PTI
ವಿಶ್ವಕಪ್ ಪ್ರಶಸ್ತಿ ಸಮಾರಂಭದಲ್ಲಿ ನಕಲಿ ಟ್ರೋಫಿ ನೀಡಲಾಗಿತ್ತು ಎಂಬುದರ ಬಗ್ಗೆ ಭಾರಿ ವಿವಾದ ಭುಗಿಲೆದ್ದ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡಿರುವ ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಟ್ರೋಫಿ ಅಸಲಿ ಆಗಿದೆ ಎಂದು ಸ್ಪಷ್ಟನೆ ನೀಡಿದೆ.

ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದ ಗೆಲುವಿನ ನಂತರ ವಿಜೇತ ತಂಡವಾದ ಭಾರತಕ್ಕೆ ವಿಶ್ವಕಪ್‌ನ ನಕಲಿ ಪ್ರತಿಕೃತಿ ನೀಡಲಾಗಿತ್ತು ಎಂಬ ಮಾಧ್ಯಮಗಳ ವರದಿಯು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅಸಲಿ ಟ್ರೋಫಿ ಕಸ್ಟಮ್ಸ್ ಅಧಿಕಾರಿಗಳ ಬಳಿಯೇ ಇದ್ದು, ಮಹಿ ಬಳಗವನ್ನು ಐಸಿಸಿ ಮೋಸ ಮಾಡಿದೆ ಎಂಬುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಕೊಲಂಬೊಂದಿಂದ ಭಾರತಕ್ಕೆ ಟ್ರೋಫಿ ತರುವ ವೇಳೆ ತೆರಿಗೆ ಪಾವತಿಸದ ಹಿನ್ನಲೆಯಲ್ಲಿ ಮುಂಬೈನ ಕಸ್ಟಮ್ಸ್ ಅಧಿಕಾರಿಗಳು ಟ್ರೋಫಿಯನ್ನು ವಶಪಡಿಸಿಕೊಂಡಿದ್ದರು. ಇದರಿಂದಾಗಿ ನಕಲಿ ಟ್ರೋಫಿಯನ್ನು ಐಸಿಸಿ ನೀಡಿತ್ತು ಎಂದು ವರದಿಯಾಗಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಟ್ರೋಫಿಯಲ್ಲಿ ಯಾವುದೇ ಐಸಿಸಿ ಅಧಿಕೃತ ಲೋಗೊ ಕೂಡಾ ಕಂಡು ಬಂದಿರಲಿಲ್ಲ.

ಟ್ರೋಫಿ ನಕಲಿ ಎಂಬ ಪ್ರಶ್ನೆಯೇ ಉದಯಿಸುವುದಿಲ್ಲ. ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ನೀಡಲಾದ ವಿಶ್ವಕಪ್ 2011 ಟ್ರೋಫಿ ಅಸಲಿಯೇ ಆಗಿದೆ ಎಂದು ಸೋಮವಾರ ಬೆಳಗ್ಗೆ ಐಸಿಸಿ ಪ್ರಕಟನೆಯಲ್ಲಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ